ಟರ್ಲಿಂಗುವಾ

 
ಟರ್ಲಿಂಗುವಾ ಎಂಬುದು ದಕ್ಷಿಣ ಅಮೇರಿಕಾ ಹಾಗು ಮೆಕ್ಸಿಕೋ ನಡುವಿನ ಒಂದು ಸಣ್ಣ ಹಳ್ಳಿ, ಟರ್ಲಿಂಗುವಾ ಎಂದರೆ ಗಣಿಗಾರಿಕಾ ಪ್ರದೇಶ ಎಂದರ್ಥ, ಇಲ್ಲಿ 1880 ರ ಇಸವಿಯಲ್ಲಿ  ಪಾದರಸವನ್ನು ತಯಾರಿಸಲು ಬಳಸುವ ಸಿನ್ನಬಾರ್ಎಂಬ ಅದಿರಿನ ಗಣಿಗಾರಿಕೆ ವ್ಯಾಪಕವಾಗಿ ನಡೆದಿತ್ತು, ಆದರೆ 1940 ರಷ್ಟರಲ್ಲಿ ಅದಿರು ಖಾಲಿಯಾಗುತ್ತಾ ಹೋದಂತೆ ಒಬ್ಬೊಬ್ಬರಂತೆ ಜನರೂ ಬೇರೆಡೆಗೆ ಗುಳೆ ಹೊರಟರು, ನೋಡನೋಡುತ್ತ ಇಡೀ ಊರು ಖಾಲಿಯಾಗುತ್ತಾ ಹೋಯಿತು, ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಊರಿಗೆ ಘೋಸ್ಟ್ ಸಿಟಿ (ದೆವ್ವದ ಊರು) ಎಂಬ ಹೆಸರು ಬಂದಿತು. ಇಂದಿಗೂ ಅಮೇರಿಕಾದ ಬಹುತೇಕ ಊರುಗಳಿಗೆ ಹೋಲಿಸಿದರೆ ಈ ಘೋಸ್ಟ್ ಸಿಟಿ ಸ್ವಲ್ಪ ಹಿಂದುಳಿದಿದೆ ಎನ್ನಿಸುತ್ತದೆ, ಹತ್ತಿರದ ರಿಯೋ ಗ್ರಾಂಡೆ ಮತ್ತು ಬಿಗ್ ಬೆಂಡ್ ನೋಡಲು ಬರುವ ಪ್ರವಾಸಿಗರಿಂದ ಈ ಊರಿನಲ್ಲಿ ಅಲ್ಪ ಸ್ವಲ್ಪ ಜನ ಸಂಚಾರವಿದೆ.

    ರಿಚರ್ಡ್ ತನ್ನ ಜೀವನದ ಮುಕ್ಕಾಲು ಭಾಗವನ್ನು ಇಲ್ಲಿಯೇ ಕಳೆದಿದ್ದ. ಒಂದು ಗ್ಯಾಸ್ ಸ್ಟೇಷನ್ ನಡೆಸುತ್ತಿದ್ದ, ಗ್ಯಾಸ್ ಸ್ಟೇಷನ್ ಎಂದರೆ ನಮ್ಮ ಊರುಗಳಲ್ಲಿರುವ ಕಿರಾಣಿ ರೀತಿಯ ಅಂಗಡಿ, ಜೊತೆಗೆ ೨ ಪೆಟ್ರೋಲ್ ಪಂಪು ಹೊಂದಿರುವ ಅಂಗಡಿ. ಹತ್ತಿರದಲ್ಲಿಯೇ ಮನೆ, ಮನೆಯಲ್ಲಿ ಪ್ರೀತಿಯ ಮಡದಿ, ತಾವು ಹೇಳಿದಂತೆ ಕೇಳಲು,  ಸಂತೋಷವಾದಾಗ ಮುದ್ದಾಡಲು, ಬೇಸರ ಕಳೆಯಲು ಬ್ರೂನೋ ಎಂಬ ಒಂದು ಮುದ್ದಾದ ನಾಯಿ ಸಾಕಿದ್ದರು .

ಅಂಗಡಿಯ ವ್ಯವಹಾರವೇ ಅವರ ಜೀವನದ ಮೂಲ ಆದಾಯವಾಗಿತ್ತು , ಕೆಲವೊಮ್ಮೆ ಗಿರಾಕಿಗಳು ಬಂದರೆ ದಿನಕ್ಕೆ 100-200$ ಲಾಭವಾಗುತ್ತಿತ್ತು, ಇಲ್ಲದಿದ್ದರೆ ಇಲ್ಲ, ಕಷ್ಟವೋ ಸುಖವೊ ಸಂಸಾರ ಸಾಗಿಸಿಕೊಂಡು ನೆಮ್ಮದಿಯಿಂದ ನಾನು ಬಡವ, ಆಕೆ ಬಡವಿ, ಒಲವೇ ನಮ್ಮ ಬದುಕು ಎಂಬಂತೆ ಈ ವೃದ್ಧ ದಂಪತಿ ಬದುಕುತ್ತಿದ್ದರು. ಪ್ರತಿ ಭಾನುವಾರ ಊರಿನಲ್ಲಿರುವ ಒಂದೇ ಒಂದು ಚರ್ಚ್ ನಲ್ಲಿ ಊರಿನ ಮಂದಿಯೆಲ್ಲಾ ಭೇಟಿಯಾಗುತ್ತಿದ್ದರು, ಬೆಳಗ್ಗಿನ ಪ್ರಾರ್ಥನೆ ಮುಗಿಸಿ, ಸ್ನೇಹಿತರೊಡನೆ ಹರಟೆ ಹೊಡೆದು, ಮಧ್ಯಾಹ್ನ ಅಲ್ಲಿಯೇ ಹತ್ತಿರದ ರೆಸ್ಟೋರೆಂಟ್ ನಲ್ಲಿ ಊಟಮಾಡಿ ಮನೆಗೆ ಹಿಂತಿರುಗುತ್ತಿದ್ದರು. ಅಂದಿನ ಹರಟೆಯ ಪ್ರಮುಖ ವಿಷಯ ಇತ್ತೀಚಿಗೆ ವ್ಯಾಪಕವಾಗಿ ಹರಡಿರುವ ಕೋರೋನ ಫ್ಲೂ ಬಗ್ಗೆ ಯಾಗಿತ್ತು, ಕೆಲವರು ಭಯಭೀತರಾಗಿದ್ದರು, ಇನ್ನು ಕೆಲವರು ನಮಗೇನು ಆಗಲಾರದು ಎಂಬಂತೆ ಇದ್ದರು, ಟಿ ವಿ ಯಲ್ಲಿ, ನ್ಯೂಸ್ ಪೇಪರ್ ನಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ನೋಡಿದ, ಅವರವರಿಗೆ ತಿಳಿದ ಘಟನೆಗಳನ್ನು ಕುರಿತು ಚರ್ಚೆ ಮಾಡಿದರು.   

    ರಿಚರ್ಡ್ ಅಂದು ಚರ್ಚ್ ನಿಂದ ಹಿಂದಿರುಗುತ್ತಲೇ, ವಾಡಿಕೆಯಂತೆ ಭಾನುವಾರದ ವಿಶ್ರಾಂತಿ ತೆಗೆದುಕೊಳ್ಳದೇ, ಈಸ್ಟರ್ ಹಬ್ಬವಾದ್ದರಿಂದ ಒಳ್ಳೆಯ ವ್ಯಾಪಾರವಾಗಬಹುದು ಎಂದುಕೊಳ್ಳುತ್ತಾ  ಅಂಗಡಿಗೆ ಹೋಗಿ ವ್ಯಾಪಾರ ಶುರು ಮಾಡಿದ. 

ಹೀಗೆಯೇ ಕೆಲವು ದಿನಗಳು ಕಳೆದವು, ದಿನನಿತ್ಯದಂತೆ ಊಟ, ನಿದ್ದೆ, ವ್ಯಾಪಾರ ಹೀಗೇ ಏರಿಳಿತವಿಲ್ಲದೇ ಬದುಕು ಸಾಗುತ್ತಿತ್ತು. ಅದೊಂದು ದಿನ ಬೆಳಿಗ್ಗೆ ಎದ್ದು ಪ್ರೀತಿಯ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೊರಟ, ಪ್ರತಿನಿತ್ಯ ತನ್ನ ಹಿಡಿತದಲ್ಲಿರುತ್ತಿದ್ದ ನಾಯಿಯು ಅಂದು ತನ್ನನ್ನೇ ನಿಯಂತ್ರಿಸುತ್ತಿತ್ತು, ವಾಕಿಂಗ್ ಅರ್ಧಕ್ಕೇ ನಿಲ್ಲಿಸಿ ಮನೆಗೆ ಬಂದ, ಯಾಕೋ ಮೈ ಕೈ ವಿಪರೀತವಾಗಿ ನೋಯುತ್ತಿತ್ತು, ವಯೋಸಹಜ ನೋವು ಎಂದುಕೊಂಡು ಅಂಗಡಿಗೆ ಹೊರಟ. ಮಧ್ಯಾಹ್ನವಾಗುತ್ತಲೇ ಕೆಮ್ಮು ಮತ್ತು ಶೀತ ಹೆಚ್ಚಾಗತೊಡಗಿತು, ಅಂಗಡಿಯ ಬಾಗಿಲು ಹಾಕಿ ಮನೆಯ ಕಡೆಗೆ ಹೊರಟ. ಹೆಂಡತಿ ಗಾರ್ಡನ್ ನಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದಳು, ಮನೆಗೆ ಬಂದಂತೆಯೇ ಸೋಫಾ ಮೇಲೆಯೇ ಮಲಗಿದ, ಅಂಗಡಿಯಿಂದ ಇಷ್ಟು ಬೇಗ ಬಂದರಲ್ಲ ಎಂದು ಹೆಂಡತಿಗೆ ಸಂತೋಷವಾಗಿ, ಮಾತನಾಡಿಸತೊಡಗಿದಳು, ಆದರೆ ಆತನಿಗೆ ವಿಪರೀತ ನಿಶ್ಯಕ್ತಿ, ಆತ ಕೆಮ್ಮುತ್ತಿದ್ದುದನ್ನು ನೋಡಿ ಜ್ವರ ಏನಾದರೂ ಇದೆಯೇ ಎಂದು ನೋಡಿದಳು, ಮೈ ಸುಡುತ್ತಿತ್ತು, ತಾಪಮಾನ 101 ಫಾರೆನ್ ಹೀಟ್ ದಾಟಿತ್ತು, ತಕ್ಷಣ ಪರಿಚಯದ ವೈದ್ಯರಿಗೆ ಕರೆಮಾಡಿ, ಸಂಜೆ ಆಸ್ಪತ್ರೆಗೆ ಹೋದರು.  ಬಿ. ಪಿ, ಹೃದಯದ ಒತ್ತಡ ಮತ್ತು ತಾಪಮಾನ ಎಲ್ಲವನ್ನು ನೋಡಿದ ವೈದ್ಯರು ಸ್ವಲ್ಪ ಹೆದರಿದಂತೆ ಕಂಡರು,
ವೈದ್ಯರು ರಿಚರ್ಡ್ ಗೆ ಕೆಲವು ಪ್ರಶ್ನೆಗಳನ್ನು ಕೇಳಲು ಶುರು ಮಾಡಿದರು, ನೀವು ಇತ್ತೀಚಿಗೆ ಯಾರಾದರೂ ಹುಷಾರಿಲ್ಲದವರನ್ನು ಭೇಟಿಯಾಗಿದ್ದೀರಾ?, ಅಥವಾ ಯಾವುದಾದರೂ ಸಭೆ ಸಮಾರಂಭಕ್ಕೆ ಹೋಗಿದ್ದೀರಾ? ಹೀಗೆಲ್ಲ ಹಲವಾರು ಪ್ರಶ್ನೆಗಳನ್ನು ಕೇಳಿದರು.

ನಿಮ್ಮ ವಯಸ್ಸು, ತಾಪಮಾನ ಹಾಗು ಎಲ್ಲ ಲಕ್ಷಣಗಳನ್ನು ನೋಡಿದರೆ ನಿಮಗೆ ಈ ಕೋರೋನ ಫ್ಲೂ ಇರಬಹುದು ಎಂದೆನಿಸುತ್ತದೆ, ಯಾವುದಕ್ಕೂ ನಿಮ್ಮ ರಕ್ತದ ಮತ್ತು ಕಫದ ಮಾದರಿಯನ್ನು ಮುಂದಿನ ಹಂತದ ಟೆಸ್ಟಿಂಗ್ ಗೆ ಕಳುಹಿಸುತ್ತೇವೆ, ಕೆಲವೇ ದಿನಗಳಲ್ಲಿ ಫಲಿತಾಂಶ ತಿಳಿಯುತ್ತದೆ, ಅಲ್ಲಿಯವರೆಗೂ ನೀವು ಮನೆಯಿಂದ ಎಲ್ಲಿಯೂ ಹೊರ ಹೋಗಬಾರದು ಮತ್ತು ಒಂದು ಪ್ರತ್ಯೇಕ ಕೋಣೆಯಲ್ಲಿ ವಾಸಿಸಬೇಕು,  ನಾನು ಕೊಟ್ಟಿರುವ ಮಾತ್ರೆಗಳನ್ನು ಸೇವಿಸಬೇಕು, ಫಲಿತಾಂಶ ಬಂದ ತಕ್ಷಣ ಫೋನ್ ಮಾಡಿ ತಿಳಿಸುತ್ತೇನೆ ಎಂದು ಹೇಳುತ್ತಾ ಮನೆಗೆ ಕಳುಹಿಸಿದರು.
 
    ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ರಿಚರ್ಡ್ ವಾಸಿಸತೊಡಗಿದನು, ಪ್ರತಿದಿನ ಊಟ ಉಪಹಾರವನ್ನು ಹೆಂಡತಿ ಬಾಗಿಲ ಬಳಿ ಇಡುತ್ತಿದ್ದಳು, ಈತ ತನ್ನ ಕೊನೆಯಲ್ಲಿ ಕುಳಿತು  ಊಟ ಮಾಡುತ್ತಿದ್ದ, ಸಂಜೆಯ ಸಮಯದಲ್ಲಿ ಆತನು ಬಾಗಿಲ ಬಳಿ ಬಂದು ಕೂರುತ್ತಿದ್ದ, ಹೆಂಡತಿಯು ಹಾಲ್ ನಲ್ಲಿ ಕುಳಿತು, ಗಂಟೆಗಟ್ಟಲೆ ಇಬ್ಬರು ಹರಟೆ ಹೊಡೆಯುತ್ತಿದ್ದರು, ಹೀಗೆ ಕೆಲವು ದಿನಗಳನ್ನು ಕಳೆದರು.

ರಿಚರ್ಡ್ ದಿನನಿತ್ಯದಂತೆ, ಪ್ರೀತಿಯ ಮಡದಿಯ ಕೈರುಚಿಯ ಊಟವನ್ನು ಸವಿಯುತ್ತಿದ್ದ , ತನ್ನ ಮೊಬೈಲ್ ಗೆ ಯಾರದೋ ಕರೆ ಬಂದಿತು, ವೈದ್ಯರ ಕರೆಗೆ ಕಾಯುತ್ತಿದ್ದ ಈತ ಹೆದರುತ್ತ ಫೋನ್ ಎತ್ತಿದನು, ಕ್ಲಿನಿಕ್ ನಿಂದ ವೈದ್ಯರು ಮಾತನಾಡುತ್ತ, ಆರೋಗ್ಯದ ಬಗ್ಗೆ ವಿಚಾರಿಸಿದರು ಮತ್ತು ನಿಮ್ಮ ರಕ್ತದ ಮಾದರಿಯು  ಫ್ಲೂ ಟೆಸ್ಟ್ ಗೆ ಪಾಸಿಟಿವ್ ಎಂದು ಬಂದಿದೆ, ಹೆದರಬೇಕಾದ ಅವಶ್ಯಕತೆ ಇಲ್ಲ, ಇದನ್ನು ನಾವೆಲ್ಲಾ ಸೇರಿ ಪರಿಹರಿಸಬಹುದು, ಆದಷ್ಟು ಬೇಗ ನೀವು ಆಸ್ಪತ್ರೆಗೆ ಬರಬೇಕು, ಇನ್ನು ಅರ್ಧ ಗಂಟೆಯಲ್ಲಿ ಮನೆಯ ಹತ್ತಿರ ಆಂಬುಲೆನ್ಸ್ ಬರುತ್ತದೆ, ಬೇಕಾದ ಬಟ್ಟೆ ಬರೆಗಳನ್ನು ತೆಗೆದುಕೊಂಡು ಸಿದ್ಧವಾಗಿರಿ ಎಂದು ಹೇಳಿದರು. ಹೆಂಡತಿಯು ಅದಾಗಲೇ ಹೆದರಿದ್ದಳು, ಅವಳಿಗೆ ಸಮಾಧಾನ ಮಾಡುತ್ತಾ,  ನೀನು ನನಗಾಗಿ ದೇವರಲ್ಲಿ ಪ್ರಾರ್ಥಿಸು, ನಮ್ಮ ಪ್ರೀತಿ ನಮ್ಮನ್ನು ಕಾಪಾಡುತ್ತದೆ ಎನ್ನುತ್ತಾ ತನ್ನ ಬಟ್ಟೆ ಬರೆ, ಒಂದೆರಡು ಪುಸ್ತಕ ಗಳನ್ನು ಒಂದು ಚೀಲಕ್ಕೆ ಹಾಕಿಕೊಂಡು ತಯಾರಾದ. 

    ಅಂಗಡಿಯ ಬೀಗ ಕಬೋರ್ಡ್ ನಲ್ಲಿ ಇದೆ, ಪದಾರ್ಥಗಳನ್ನು ತಂದುಕೊಡುವ ಹುಡುಗನಿಗೆ ಕರೆಮಾಡಿ ಫ್ರಿಡ್ಜ್ ನಲ್ಲಿರುವ ಹಾಲು, ಮೊಸರು, ತರಕಾರಿಗಳನ್ನು ವಾಪಸ್ ತೆಗೆದುಕೊಂಡು ಹೋಗಲು ಹೇಳು, ನಾಯಿಗೆ ಪ್ರತಿದಿನ ವಾಕಿಂಗ್ ಮಾಡಿಸು, ಹೀಗೆ ತನ್ನೆಲ್ಲ ಜವಾಬ್ದಾರಿಯ ಕೆಲಸವನ್ನು ಹೆಂಡತಿಗೆ ಹೇಳಿದ, ಅಷ್ಟರಲ್ಲಿ ಮನೆಯ ಮುಂದೆ ಆಂಬುಲೆನ್ಸ್  ಬಂದಿತ್ತು, ಪ್ರೀತಿಯ ಮಡದಿಯನ್ನು ತಬ್ಬಿಕೊಳ್ಳಲೂ ಕೂಡ ಆಗದೆ, ಸರಿಯಾಗಿ ಮಾತನಾಡಲು ಆಗದೆ, ಭಾರವಾದ ಹೃದಯದಿಂದ ಆಸ್ಪತ್ರೆಗೆ ಹೊರಟ. 

    ಆಸ್ಪತ್ರೆಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡ ವೈದ್ಯರು, ಒಂದು ಕೋಣೆಯನ್ನು ತೋರಿಸುತ್ತ ನೀವು ಸದ್ಯಕ್ಕೆ ಇಲ್ಲಿಯೇ ಇರಬೇಕು, ಮಾತ್ರೆ ಮತ್ತು ಊಟವನ್ನು ಇಲ್ಲಿಗೇ ಕಳುಹಿಸುತ್ತೇನೆ ಎನ್ನುತ್ತಾ ರಿಚರ್ಡ್ ನನ್ನು ಕೋಣೆಯೊಳಗೆ ಕಳುಹಿಸಿ ಹೊರಗಡೆಯಿಂದ ಬಾಗಿಲು ಹಾಕಿಕೊಂಡರು.

ಎರಡು ಮೂರು ದಿನಗಳು ಕಳೆದಂತೆ ಶೀತ, ಕೆಮ್ಮು, ಕಫ ಹೆಚ್ಚಾಗುತ್ತಾ ಹೋಯಿತು, ಉಸಿರಾಟ ಅಸಾಧ್ಯವಾಯಿತು, ರೋಗವು ಮುಂದಿನ ಹಂತಕ್ಕೆ ತಲುಪಿದೆ ಎಂದು ತಿಳಿದ ವೈದ್ಯರು ವೆಂಟಿಲೇಟರ್ ರೂಮಿಗೆ ವರ್ಗಾಯಿಸಲು ತಿಳಿಸಿದರು.

ವರ್ಗಾಯಿಸುವಾಗ ರಿಚರ್ಡ್ ತನ್ನ ಕೋಣೆಯಿಂದ ಹೊರ ಬರುತ್ತಿದ್ದಂತೆ ಆತನಿಗೆ ಆಘಾತವಾಯಿತು, ಆಸ್ಪತ್ರೆಯ ತುಂಬಾ, ಎಲ್ಲಿ ನೋಡಿದರೆ ಅಲ್ಲಿ ಜನ, ಕಾರಿಡಾರ್ ನಲ್ಲಿ ಹಲವಾರು ಜನ ಮಲಗಿದ್ದಾರೆ, ಜನರು ಒಬ್ಬರನ್ನೊಬ್ಬರು ತಳ್ಳಿಕೊಂಡು ವೈದ್ಯರನ್ನು ಮಾತನಾಡಿಸಲು ಬರುತ್ತಿದ್ದಾರೆ. ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾರೆ, ತನ್ನ ಜೀವಿತಾವಧಿಯಲ್ಲಿ ಇಂತಹ ಯಾವುದೇ ಘಟನೆಯನ್ನು ಆತ ನೋಡಿರಲಿಲ್ಲ. ಭಯಭೀತನಾಗಿ ನೋಡುತ್ತಾ ಯೋಚಿಸಿದ. ಸ್ವಸ್ಥವಾಗಿ ಆರೋಗ್ಯವಾಗಿದ್ದ ಊರಿನ ಮಂದಿಗೆಲ್ಲಾ ಇದೇಕೆ ಹೀಗಾಯಿತು ಎಂದುಕೊಂಡ,   
ನಂತರ ವೆಂಟಿಲೇಟರ್ ಕೋಣೆಯಲ್ಲಿ ಕೈಗೆ ಡ್ರಿಪ್ಸ್ ಹಾಕಿ, ಮೂಗಿಗೆ ಆಕ್ಸಿಜನ್ ಮಾಸ್ಕ್ ಹಾಕಿದ ಮೇಲೆ ಸ್ವಲ್ಪ ಉಸಿರಾಡಲು ಸಾಧ್ಯವಾಯಿತು. ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳು ಹೆಚ್ಚಾಗ ತೊಡಗಿದರು, ವೈದ್ಯರು, ನರ್ಸ್ ಗಳು ಎರಡು ಪಾಳಿಯಲ್ಲಿ ಕೆಲಸ ಮಾಡಬೇಕಾಯಿತು. ಚಿಕ್ಕ ಆಸ್ಪತ್ರೆಯಾದ್ದರಿಂದ ಕೇವಲ ೧೦ ವೆಂಟಿಲೇಟರ್ ಗಳಿದ್ದವು.   

ಆಸ್ಪತ್ರೆಯ ಮೇಲಾಧಿಕಾರಿಯ ಮಗನಾದ 27 ವರ್ಷದ ಕೆವಿನ್ ಗೆ ಕೂಡ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆತ
ಒಂದು ತಿಂಗಳ ಹಿಂದಷ್ಟೇ ಸ್ಪೇನ್ ನಿಂದ ಬಂದಿದ್ದ, ದುರಾದೃಷ್ಟದಿಂದ ಹಾಗೂ ತನ್ನ ನಿರ್ಲಕ್ಷ್ಯದಿಂದ ರೋಗದ ಕೊನೆಯ ಹಂತವನ್ನು ತಲುಪಿದ್ದ. ಅಂದು ರಾತ್ರಿ ವೈದ್ಯರಿಗೆ ಮೇಲಧಿಕಾರಿಯಿಂದ ಕರೆ ಬಂದಿತ್ತು, ತನ್ನ ಮಗನಿಗೆ ವೆಂಟಿಲೇಟರ್ ಅಗತ್ಯವಿದೆ, ಏನಾದರೂ ಮಾಡಿ ಇಂದು ಬೆಳಿಗ್ಗೆ ವೆಂಟಿಲೇಟರ್ ರೂಮಿಗೆ ಕಳುಹಿಸಿದ ರೋಗಿಯನ್ನು ವಾರ್ಡ್ ಗೆ ವರ್ಗಾಯಿಸಿ, ಆ ರೂಮನ್ನು ಈಗಲೇ ಖಾಲಿ ಮಾಡಿಸಿ ಎಂದರು, ವೈದ್ಯರು ರಿಚರ್ಡ್ ನ ಪರಿಸ್ಥಿತಿ ಹಾಗು ವಯಸ್ಸನ್ನು ಹೇಳಿ ವಿವರಿಸಿದರೂ ಅಧಿಕಾರಿಯು ಕೇಳಲಿಲ್ಲ, ತನ್ನ ಮಾತನ್ನು ಕೇಳದಿದ್ದರೆ, ನಿಮ್ಮ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೆದರಿಸಿದರು.

ವಿಧಿ ಇಲ್ಲದೆಯೇ ರಿಚರ್ಡ್ ನನ್ನು ಮತ್ತೆ ಜನರಲ್ ವಾರ್ಡ್ ರೂಮಿಗೆ ವರ್ಗಾಯಿಸಲು ವೈದ್ಯರು ನರ್ಸ್ ಗೆ ಹೇಳಿದರು, ರಿಚರ್ಡ್   ತಾನು ಹುಷಾರಾಗುತ್ತಿದ್ದೇನೆ ಹಾಗಾಗಿ ಮೊದಲಿನಂತೆಯೇ ತನ್ನ ಕೋಣೆಗೆ ವರ್ಗಾಯಿಸುತ್ತಿದ್ದಾರೆ ಎಂದುಕೊಂಡು ಸಂತಸ ಪಟ್ಟ. ನರ್ಸ್ ತನ್ನನ್ನು ಸ್ಟ್ರೆಚರ್ ನಲ್ಲಿ ಕಾರಿಡಾರ್ ನಿಂದ  ಕರೆದುಕೊಂಡು ಹೋಗುವಾಗ,  ಇನ್ನೊಬ್ಬ ವ್ಯಕ್ತಿಯನ್ನು ತಾನಿದ್ದ ವೆಂಟಿಲೇಟರ್ ರೂಮಿಗೆ ಕರೆದುಕೊಂಡು ಹೋಗುತ್ತಿದ್ದುದ್ದನ್ನು ನೋಡಿದನು. 

    ರಿಚರ್ಡ್ ಆ ವ್ಯಕ್ತಿಯನ್ನು ನೋಡಿದಾಗ ಇವನನ್ನು ಎಲ್ಲೋ ನೋಡಿದ್ದೀನಲ್ಲ ಎಂದು ಯೋಚಿಸಿದನು.  ಅರೇ, ಇವನು ಆಸ್ಪತ್ರೆಯ ಮೇಲಧಿಕಾರಿಯ ಮಗನಲ್ಲವೇ, ಕಳೆದ ತಿಂಗಳು  ಸ್ಪೇನ್ ನಿಂದ ಬಂದಿದ್ದ, ತನ್ನ ಅಂಗಡಿಗೂ ಬಿಯರ್ ತೆಗೆದುಕೊಳ್ಳಲು ಆಗಾಗ ಬರುತ್ತಿದ್ದ, ಕಳೆದ ಈಸ್ಟರ್ ಹಬ್ಬದ ದಿನದಂದು ಬಂದಾಗ ಅತಿಯಾಗಿ ಕೆಮ್ಮುತ್ತಿದ್ದ, ಏನಾಯಿತು ಎಂದು ಕೇಳಿದರೆ ಸ್ವಲ್ಪ ಚಳಿ ಗಾಳಿಗೆ ಓಡಾಡಿ ಹೀಗಾಗಿದೆ, ನನಗೇನು ಆಗುವುದಿಲ್ಲ, ಹಾಗೇನಾದರು ಹೆಚ್ಚು ಕಮ್ಮಿ ಆದರೂ, ನನ್ನ ತಂದೆಯದೇ ಆಸ್ಪತ್ರೆ ಇದೆ, ನನಗೇನೂ ಆಗುವುದಕ್ಕೆ ನನ್ನ ತಂದೆ ಬಿಡುವುದಿಲ್ಲ, ಎಂದೆಲ್ಲ ಮಾತನಾಡುತ್ತ ಸುಮಾರು 20-30 ನಿಮಿಷ ಮಾತನಾಡಿ ಆತ್ಮೀಯವಾಗಿ ತಬ್ಬಿಕೊಂಡು ಹಬ್ಬದ ಶುಭಾಶಯವನ್ನು ಹೇಳಿದ್ದ.  ಈತ ಇಷ್ಟು ಸಣ್ಣ ವಯಸ್ಸಿನವನು, ಇವನಿಗೂ ಈ ಫ್ಲೂ ಬಂದಿರಬಹುದಾ?, ಅಯ್ಯೋ ಪಾಪ, ಆದರೆ ಇದು ಅವನ ತಂದೆಯದೇ ಆಸ್ಪತ್ರೆ,  ಹೇಗಾದರೂ ಮಾಡಿ ಅವನನ್ನು ಉಳಿಸಿಕೊಳ್ಳುತ್ತಾರೆ ಎಂದುಕೊಂಡ. 

ನಂತರ ಆಲೋಚಿಸಿದ, ಈ ಕೆವಿನ್ ತನ್ನನ್ನು ಕೊನೆಯಬಾರಿ ಭೇಟಿಯಾಗಿದ್ದು ಈಸ್ಟರ್ ನ ದಿನ, ತನಗೆ ಅನಾರೋಗ್ಯ ಶುರುವಾದದ್ದು ಈಸ್ಟರ್ ಹಬ್ಬದಿಂದ  ಎರಡು ಮೂರು ದಿನದಲ್ಲಿ , ಅದಾದ ನಂತರ ವೈದ್ಯರನ್ನು ಭೇಟಿಮಾಡಿ ಮನೆಯಲ್ಲೇ ಇದ್ದೆ, ಯಾರನ್ನೂ ಭೇಟಿಮಾಡಿಲ್ಲ, ಹೀಗೆ ಯೋಚಿಸುತ್ತಾ ರಿಚರ್ಡ್ ಗೆ, ತನಗೆ ರೋಗ ಹರಡಿರುವುದು ಬಹುಷಃ ಇವನಿಂದಲೇ ಇರಬಹುದು ಎಂದು ಎನ್ನಿಸಿತು ಮತ್ತು ಈತನಿಗಾಗಿಯೇ ತಾನಿದ್ದ ವೆಂಟಿಲೇಟರ್ ಕೋಣೆಯನ್ನು ಖಾಲಿಮಾಡಿಸಿದ್ದು ಎಂದು ತಿಳಿದು, ಕೋಪದಿಂದ ಹೃದಯಬಡಿತ, ರಕ್ತದೊತ್ತಡ ಜಾಸ್ತಿಯಾಯಿತು, ವೆಂಟಿಲೇಟರ್ ಇಲ್ಲದ ತನ್ನ ಕೋಣೆಯಲ್ಲಿ ಉಸಿರಾಡುವುದು ಇನ್ನಷ್ಟು ಕಷ್ಟವಾಯಿತು, ರಾತ್ರಿಯೆಲ್ಲಾ ಹೀಗೆ ನರಳಾಡುತ್ತಾ ಮಂಜಾನೆಯಾಗುವಷ್ಟರಲ್ಲಿ ರಿಚರ್ಡ್ ನ ಪ್ರಾಣ ಹೋಗಿತ್ತು. 

ವೈದ್ಯರ ಮಾತನ್ನು ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸಿದ ದುರಹಂಕಾರಿ ಯುವಕನಿಂದ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ, ಅಸಹಾಯಕ ರಿಚರ್ಡ್ ನ ಪ್ರಾಣ ಹೋಗಿತ್ತು. ಆತನ ಹೆಂಡತಿ ಮತ್ತು ಪ್ರೀತಿಯ ನಾಯಿ ಅನಾಥರಾಗಿದ್ದರು, ಯಾರದೂ ತಪ್ಪಿಗೆ ಅಮಾಯಕರಾದ ವೃದ್ಧ ದಂಪತಿಗಳು ಶಿಕ್ಷೆಯನ್ನು ಅನುಭವಿಸಬೇಕಾಯಿತು.


- ಲಾವಣ್ಯ.ಎಸ್.ಎಸ್.

Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ