ಸ್ಯಾನ್ ಅಂಟೋನಿಯೋ
ಸ್ಯಾನ್ ಅಂಟೋನಿಯೋ ನಗರದ ಪ್ರಮುಖ ಆಕರ್ಷಣೆಗಳಲ್ಲಿ ರಿವರ್ ವಾಕ್ ತುಂಬಾ ಪ್ರಮುಖವಾದದ್ದು, ಸುಮಾರು 1937 ರಲ್ಲಿ ಶುರುವಾದ ಈ ರಿವರ್ ವಾಕ್ ಅನ್ನು ಟೆಕ್ಸಾಸ್ ನ ವೆನ್ನಿಸ್ ನಗರ ಎಂದೇ ಕರೆಯುತ್ತಾರೆ, ಸುಮಾರು 15 ಮೈಲಿಗಳಷ್ಟು ಉದ್ದಗಲವಿರುವ ರಿವರ್ ವಾಕ್ , ಸ್ಯಾನ್ ಅಂಟೋನಿಯೋ ನಗರದ ಡೌನ್ ಟೌನ್ ನಿಂದ ಹಿಡಿದು ಪ್ರಮುಖ ಪ್ರದೇಶಗಳಾದ ಆರ್ನೆಸೊನ್ ರಿವರ್ ಥಿಯೇಟರ್ , ಮ್ಯಾರೇಜ್ ಐಲ್ಯಾಂಡ್, ಲಾ ವಿಲಿಟಾ , ಟವರ್ ಲೈಫ್ ಬಿಲ್ಡಿಂಗ್ ಹೀಗೆ ಹಲವು ಪ್ರವಾಸಿಗರ ತಾಣಕ್ಕೆ ಸಂಪರ್ಕ ಒದಗಿಸುತ್ತದೆ, ರಿವರ್ ವಾಕ್ ಅನ್ನು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲಾಗಿದೆ
ಹಗಲು ಹೊತ್ತು ಕೆರೆ ದಂಡೆಯ ಮೇಲಿನ ಸಾಲು ಸಾಲು ಅಂಗಡಿಯಂತೆ ಕಂಡರೆ, ಮುಸ್ಸಂಜೆಯಾಗುತ್ತಿದ್ದಂತೆ ಇಲ್ಲಿನ ವಾತಾವರಣ ಮತ್ತು ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತದೆ, ಮದುವೆಯ ಆರತಕ್ಷತೆಯ ಮಂಟಪದಂತೆ ಮೈ ತುಂಬಾ ಝಗಮಗಿಸುವ ದೀಪಾಲಂಕಾರಗಳಿಂದ ಅಲಂಕಾರಗೊಳ್ಳುತ್ತದೆ,ನದಿಯ ಬದಿಯಲ್ಲಿ ರೆಸ್ಟೋರೆಂಟ್ ಗಳಲ್ಲಿ ಕುಳಿತು ವೈನ್ ಆಸ್ವಾದಿಸುತ್ತಿರುತ್ತಾರೆ,
ಕೆಲವರು ತಮ್ಮ ಇಷ್ಟದ ಹಾಡುಗಳನ್ನು ಹಾಡುತ್ತಾ ನಡೆಯುತ್ತಿರುತ್ತಾರೆ, ಹದಿ ಹರೆಯದ ವಯಸ್ಸಿನ ತರುಣ ತರುಣಿಯರು ಯಾರೂ ನೋಡುತ್ತಿಲ್ಲ ವೇನೂ ಎಂಬಂತೆ ಸ್ವಾತಂತ್ರ್ಯವನ್ನು ಆಸ್ವಾದಿಸುತ್ತಾ ಕೈ ಕೈ ಹಿಡಿದು ಓಡಾಡುತ್ತಾರೆ. ಸಣ್ಣದಾದ ಹರಿಯುವ ನದಿ ತನ್ನ ಸುತ್ತಮುತ್ತಲ ಅಂಗಡಿಗಳ , ದೀಪಾಲಂಕಾರಗಳ , ದೇಶ ವಿದೇಶಗಳ ಪ್ರವಾಸಿಗರ ಅಲಂಕಾರವನ್ನು , ತನ್ನ ನಲ್ಲ ನಿಂದ ಪಡೆದ ಮುತ್ತಿಗೆ ಕೆಂಪಗಾದ ಹುಡುಗಿಯ ಕೆನ್ನೆಯ ಬಣ್ಣವನ್ನು , ಅಲ್ಲೇ ಈಜಾಡುತ್ತಿರುವ ಬಾತುಕೋಳಿಗಳ ಶ್ವೇತ ವರ್ಣವನ್ನು ಎಲ್ಲವನ್ನು ಪ್ರತಿಫಲಿಸಿ ನಗರದ ಸೌಂದರ್ಯ ವನ್ನು ಇಮ್ಮಡಿ ಗೊಳಿಸುತ್ತಿರುತ್ತದೆ.
ಶತಮಾನಗಳಿಂದಲೂ ನದಿಯ ಹತ್ತಿರದಲ್ಲಿಯೇ ನಾಗರೀಕತೆಯ ಉಗಮವಾದಂತೆ. ಇಲ್ಲಿಯೂ ಕೂಡ ಸಾವಿರಾರು ಮಂದಿ ಈ ನದಿಯನ್ನು ಆಧರಿಸಿ ಜೀವನ ನಡೆಸುತ್ತಿದ್ದಾರೆ, ಆ ಸಾವಿರಾರು ಮಂದಿಯಲ್ಲಿ ರಿಚಿ ಕೂಡ ಒಬ್ಬ , ರಿವರ್ ವಾಕ್ ಸುತ್ತಲೂ ತನ್ನ ಬಿಳಿಯ ಬಣ್ಣದ ಎತ್ತರದ ಕುದುರೆಯ ಸಾರೋಟನ್ನು ಏರಿ ಪ್ರವಾಸಿಗರಿಗೆ ನಗರದ ಪ್ರದರ್ಶನ ಮಾಡಿಸುತ್ತಾ ತನ್ನ ಜೀವನ ನಡೆಸುತ್ತಾನೆ.
ರಿವರ್ ವಾಕ್ ಸುತ್ತ ತನ್ನ ಸಾರೋಟಿನಲ್ಲಿ ಒಂದು ಸುತ್ತು ಸುತ್ತಲು ಸುಮಾರು 50 $ ತೆಗೆದುಕೊಳ್ಳುತ್ತಿದ್ದ, ಖರ್ಚು ಮಾಡಲೆಂದೇ ಬಂದಿರುವ ಪ್ರವಾಸಿಗರಿಗೆ 50$ ಯಾವ ಲೆಕ್ಕ , ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಸಾರೋಟಿನಲ್ಲಿ ತಾವೇ ರಾಜ ರಾಣಿಯರಂತೆ ಬೀಗಿ ಆನಂದ ಪಡುತ್ತಿದ್ದರು ನೀಲಿಯ ಬಣ್ಣದ ಸೀರಿಯಲ್ ಸೆಟ್ ಲೈಟ್ ಹಾಕಿ, ಪ್ಲಾಸ್ಟಿಕ್ ನ ಹೂವುಗಳಿಂದ ಅಲಂಕರಿಸಿ ಸಾರೋಟನ್ನು, ಮಾಯಾಲೋಕದ ರಥ ದಂತೆ ಕಾಣುವಂತೆ ಮಾಡಿದ್ದ. ಸಿಂಡ್ರೆಲಾಳ ಕಥೆಯಲ್ಲಿ ಬರುವ ರಾಜನ ರಥದಂತೆ ಕಾಣುವಂತೆ ಸಿದ್ದಪಡಿಸಿದ್ದ ದಿನವೂ ಹೊಸ ಉತ್ಸಾಹ, ಸಂತಸದಿಂದ ಕೆಲಸ ಶುರುಮಾಡುತ್ತಿದ್ದ , ಆತನ ಹುಮ್ಮಸ್ಸು ಮತ್ತು ಮಾತಿನ ದಾಟಿಗೆ ಮರುಳಾಗಿ ಪ್ರವಾಸಿಗರು 10-20$ ಹೆಚ್ಚು ಟಿಪ್ಸ್ ಕೊಟ್ಟು ಹೋಗುತ್ತಿದ್ದರು ದಿನ ನಿತ್ಯ ತಾನೇ ತಯಾರಿಸಿದ ಊಟ ಮಾಡಿ ಬೇಸರವಾಗಿ, ನದಿಯ ಆಸುಪಾಸಿನ ಹೋಟೆಲಿನಲ್ಲಿ ಏನಾದರೂ ತಿನ್ನೋಣ ಎಂದು ಹೊರಟ. ಪಿಜ್ಜಾ ತಿನ್ನಲು ಮನಸಾಗಿ ಅಲ್ಲಿಯೇ ಇರುವ ‘ರೀಟಾಸ್ ಆನ್ ರಿವರ್’ ರೆಸ್ಟೋರೆಂಟ್ ಗೆ ಹೊರಟ. ಸ್ಪ್ಯಾನಿಷ್ ಮಾತನಾಡುವ ಜನರ ರೆಸ್ಟೋರೆಂಟ್ ಆಗಿದ್ದರಿಂದ ಅಲ್ಲಿಯ ರಿಸೆಪ್ಶನಿಸ್ಟ್ ” ಹೋಲಾ” ಎಂದು ಸ್ವಾಗತಿಸಿದಳು , ಹೆಚ್ಚಾಗಿ ಸ್ಪ್ಯಾನಿಷ್ ಮಾತನಾಡುವ ಜನರೇ ಇರುವುದರಿಂದ ಮೆನು ಕೂಡ ಸ್ಪ್ಯಾನಿಶ್ ನಲ್ಲಿಯೇ ಇತ್ತು, ಈತ ಒಂದು ‘ಥಿನ್ ಕ್ರಸ್ಟ್ ಗಾರ್ಡನ್ ಪಿಜ್ಜಾ’ ಆರ್ಡರ್ ಮಾಡಿ ಕಾಯುತ್ತ ಕುಳಿತ, ನಮ್ಮೂರಿನ ಹಳೆಯ ಕಾಲದ ಹಸಿಸೌದೆ ಬಳಸಿ ಮಾಡುವ ಅಡುಗೆಯಂತೆ ಇಲ್ಲಿಯೂ ಸೌದೆಯ ಒಲೆಯಲ್ಲಿ ಪಿಜ್ಜಾ ಮಾಡುತ್ತಾರೆ ,ಇದು ಫೈರ್ ವುಡ್ ಪಿಜ್ಜಾ ಎಂದೇ ಖ್ಯಾತಿ.
ಮೈದಾ ಹಿಟ್ಟಿನ ಕೊನೆಯ ಪದರ ಹದವಾಗಿ ಬೇಯುತ್ತಿತ್ತು , ಅದರ ಮೇಲಿನ ಚೀಸ್ ಕರಗಿ ಬೆಂದು ಪಾತ್ರೆಯ ಅಂಚಿಗೆ ತಾಗಿ ಘಮ ಘಮ ಎಂದು ಸುವಾಸನೆ ಬೀರುತ್ತಿತ್ತು, ಮೇಲಿದ್ದ ಮಶ್ರೂಮ್, ಕ್ಯಾಪ್ಸಿಕಂ ಮತ್ತಿತರ ತರಕಾರಿಗಳು ಬೆಂದು ಗರಿಗರಿಯಾಗಿ ಅಲ್ಲಿಯೇ ಸುರುಟಿಕೊಳ್ಳುತ್ತಿದ್ದವು. ಅಡುಗೆಯ ಮನೆಯಕಡೆಗೆ ನೋಡುತ್ತಾ ಊಟಕ್ಕಾಗಿ ಕಾಯುತ್ತಿದ್ದವನಿಗೆ, ತನ್ಮಯತೆಯಿಂದ ಪಿಜ್ಜಾ ಬೇಯಿಸುತ್ತಿದ್ದ ಸುಂದರವಾದ ಹುಡುಗಿ ಕಾಣಿಸಿದಳು, ಊರಿಗೆ ಹೊಸದಾಗಿ ಬಂದಿರುವ ಹುಡುಗಿ ಎಂದು ತಕ್ಷಣವೇ ತಿಳಿಯಿತು, ಆ ಕೇರಿಯ ಹರೆಯ ವಯಸ್ಸಿನ ಎಲ್ಲಾ ಹುಡುಗಿಯರನ್ನು ನೋಡಿ ನೋಡಿ ಪರಿಚಯ ಮಾಡಿಕೊಂಡಿದ್ದ, ಹಾಗಾಗಿ ಈಕೆ ಹೊಸ ಹುಡುಗಿ ಎಂದು ತಿಳಿಯಲು ಆತನಿಗೆ ಜಾಸ್ತಿ ಸಮಯ ಬೇಕಾಗಲಿಲ್ಲ.
ವೆನೆಸ್ಸಾ ಒಂದು ವಾರದ ಮುಂಚೆ ಕೆಲಸಕ್ಕೆ ಸೇರಿದ್ದಳು, ಬಿಸಿಲಿನ ಊರಾದ ಅರಿಝೋನಾದಿಂದ ಹೊಸ ಬದುಕನ್ನು ಅರಸಿಕೊಂಡು ಆದಾಗ ತಾನೇ ಈ ಊರಿಗೆ ಬಂದಿದ್ದಳು, ಸೌಮ್ಯ ಸ್ವಭಾವ , ಯಾರನ್ನಾದರೂ ಸೆಳೆಯಬಲ್ಲ ಸುಂದರ ನಗು, ಮನಸ್ಸಿನಷ್ಟೇ ಪರಿಶುದ್ದವಾದ ಮುಖಚರ್ಯೆ. ಆಕೆಯ ಚಲನ ವಲನ ಗಳನ್ನೂ ನೋಡುತ್ತಾ ಕುಳಿತ ರಿಚಿಗೆ ಹಸಿವು ಇನ್ನಷ್ಟು ಹೆಚ್ಚಾಯಿತು. ಆತನ ಅದೃಷ್ಟಕ್ಕೆ ಆಕೆಯೇ ಪಿಜ್ಜಾ ತಂದು ಟೇಬಲ್ ಮೇಲಿರಿಸಿ ಹೋದಳು.
ಆಕೆಯನ್ನು ಹತ್ತಿರದಿಂದ ನೋಡಿ ಮತ್ತಷ್ಟು ತಳಮಳಗೊಂಡ. ಆದರೂ ಧ್ಯೆರ್ಯ ಮಾಡಿ ವೆರಿ ಟೇಸ್ಟಿ ಪಿಜ್ಜಾ ಎಂದ, ರುಚಿಯೇ ನೋಡದೆ ಹೊಗಳುತ್ತಿರುವ ಈತನನ್ನು ನೋಡಿ ಆಕೆ ಸುಮ್ಮನೆ ನಕ್ಕು , ಧನ್ಯವಾದ ಎಂಬಂತೆ ತಲೆ ಅಲ್ಲಾಡಿಸುತ್ತಾ ಮತ್ತೆ ಅಡುಗೆ ಮನೆಗೆ ಹೊರಟಳು
ಆಕೆಯನ್ನು ನೋಡಲೆಂದೇ ಪದೇ ಪದೇ ಆ ರೆಸ್ಟೋರೆಂಟ್ ಗೆ ಹೋಗುತ್ತಿದ್ದ. ಆಕೆಯನ್ನು ಮಾತನಾಡಿಸಬೇಕು ಎಂದು ಹಪಹಪಿಸಿದ , ಆದರೆ ಈತನಿಗೆ ಸ್ಪ್ಯಾನಿಷ್ ಬರುವುದಿಲ್ಲ, ಆಕೆಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ, ಆದರೂ ಕಣ್ಣಿನ ಸನ್ನೆಯಲ್ಲೆ ತನ್ನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ. ಒಮ್ಮೆ ಸುಮಾರು 8 ಗಂಟೆಗೆ ತನ್ನ ಸಾರೋಟಿನ ಮುಂದೆ ಪ್ರವಾಸಿಗರಿಗೆ ಕಾಯುತ್ತಾ ಕುಳಿತಿದ್ದ , ವೆನೆಸ್ಸಾ ಬಸ್ ಗಾಗಿ ಕಾಯುತ್ತಿರುವುದನ್ನು ನೋಡಿದ, ತಾನೇ ಹೋಗಿ ‘ ಕ್ಯಾನ್ ಐ ಡ್ರಾಪ್ ಯು’ ಎಂದು ಕೇಳಿದ. ಮೊದಲಿಗೆ ಆಕೆ ಒಪ್ಪಲಿಲ್ಲವಾದರೂ ನಂತರ ಪರಿಚಿತನೆಂದು ಒಪ್ಪಿ ಸಾರೋಟು ಹತ್ತಿದಳು. ರಿಚಿಯ ಸಂತೋಷಕ್ಕೆ ಪಾರವೇ ಇರಲಿಲ್ಲ, ಆತನ ಹೃದಯ ಸಾರೋಟಿನ ಕುದುರೆಗಿಂತಾ ಹೆಚ್ಚು ವೇಗವಾಗಿ ಓಡುತ್ತಿತ್ತು, ಒಂದೆರಡು ಬಾರಿ ಧೀರ್ಘ ಉಸಿರನ್ನು ತೆಗೆದುಕೊಂಡು ಆಕೆಯನ್ನು ಮಾತನಾಡಿಸಿದ . “ ಆರ್ ಯು ಫ್ರಮ್ ಸ್ಯಾನ್ ಅಂಟೋನಿಯೋ ?” ಎಂದು ಕೇಳಿದ , ಆಕೆ ನೋ ಎಂಬುವಂತೆ ನಗುತ್ತಾ ತಲೆ ಅಲ್ಲಾಡಿಸಿದಳು, “ ಆರ್ ಯು ಫ್ರಮ್ ಟೆಕ್ಸಾಸ್?” ಎಂದು ಕೇಳಿದ. ಆಕೆ
ಅದಕ್ಕೂ ನೋ ಎಂದು ತಲೆ ಅಲ್ಲಾಡಿಸಿದಳು, ಒಮ್ಮೆ ಹಿಂತಿರುಗಿ ನೋಡಿ - ನೀವು ಇಂಗ್ಲಿಶ್
ಮಾತಾಡುತ್ತೀರಾ? ಎಂದು ಕೇಳಿದ , ಆಕೆ ಪುನಃ ಇಲ್ಲ ಎಂದು ತಲೆ ಅಲ್ಲಾಡಿಸಿದಳು, ಹಾಗಾದರೆ ತಾನು
ಆದಷ್ಟು ಬೇಗೆ ಸ್ಪಾನಿಶ್ ಕಲಿಯಬೇಕು ಅಂದು ತನಗೆ ತಾನೇ ಅಂದುಕೊಂಡ.
ಆಕೆ ತನ್ನ ಮೊಬೈಲ್ ನಲ್ಲಿ ಗೂಗಲ್ ಮ್ಯಾಪ್ ತೋರಿಸುತ್ತಾ ತನ್ನ ಮನೆಯ ಅಡ್ರೆಸ್ ತೋರಿಸಿದಳು, ಆತ
ಎಂದಿನಂತೆ ರಿವರ್ ವಾಕ್ ನ ಸುತ್ತಮುತ್ತಲ ಬಿಲ್ಡಿಂಗ್ ಗಳನ್ನೆಲ್ಲ ತೋರಿಸುತ್ತಾ ವರ್ಣ ರಂಜಿತ ಕಥೆಗಳನ್ನು
ಹೇಳುತ್ತಾ ಸಾಗಿದ.
ತುಂತುರು ಮಳೆ ಶುರುವಾಗಿ ವಾತಾವರಣ ಮತ್ತಷ್ಟು ರೋಮಾಂಚಕವಾಯಿತು. ಆಕೆಯನ್ನು ಮನೆಯ
ಹತ್ತಿರ ಬಿಟ್ಟು , ಆಕೆ ಫೋನ್ ನಂಬರ್ ಕೇಳಿದ, ಹಿಂಜರಿಯುತ್ತಾ ತನ್ನ ವ್ಯಾನಿಟಿ ಬ್ಯಾಗ್ ನಿಂದ ಒಂದು
ವಿಸಿಟಿಂಗ್ ಕಾರ್ಡ್ ತಗೆದು ಕೊಟ್ಟಳು. ರಿಚಿಗೆ ಸ್ವರ್ಗವೇ ಸಿಕ್ಕಿದಂತಾಯಿತು, “ಗ್ರಾಸಿಯಾಸ್ ” ಎಂದು
ಸ್ಪ್ಯಾನಿಷ್ ನಲ್ಲಿ ಆಕೆಗೆ ಧನ್ಯವಾದ ಹೇಳುತ್ತಾ ರಸ್ತೆಯಲ್ಲಿಯೇ ಕುಣಿದಾಡಿದ.
ಅಂದಿನಿಂದ ಶುರುವಾಯಿತು, ಪ್ರತಿ ದಿನವೂ ಹಗಲು ಸಂಜೆ ರಾತ್ರಿ ಯಾವಾಗಲೂ ಮೆಸೇಜ್ ಮಾಡುತ್ತಾ
ಮಾಡುತ್ತಾ ಮತ್ತಷ್ಟು ಆತ್ಮೀಯರಾದರು, ಆಕೆಗೆ ಇಂಗ್ಲಿಷ್ ಮಾತನಾಡಲು ಬರದಿದ್ದರೂ ಚೆನ್ನಾಗಿಯೇ
ಇಂಗ್ಲಿಷ್ ನಲ್ಲಿ ಮೆಸೇಜ್ ಟೈಪ್ ಮಾಡಿ ಕಳುಹಿಸುತ್ತಿದ್ದಳು.
ರಿಚಿ ತನ್ನ ಆತ್ಮೀಯತೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ತಾನು ಆದಷ್ಟು ಬೇಗ
ಸ್ಪ್ಯಾನಿಷ್ ಕಲಿಯ ಬೇಕೆಂದು ಅರಿತ, ಸಮಯ ಸಿಕ್ಕಾಗಲೆಲ್ಲಾ ಯು ಟ್ಯೂಬ್ ನಲ್ಲಿ ಸ್ಪ್ಯಾನಿಷ್ ವಿಡಿಯೋ
ಗಳನ್ನೂ ನೋಡುತ್ತಾ ಅಲ್ಪ ಸ್ವಲ್ಪ ಸ್ಪಾನಿಷ್ ಕಲಿತ.
ಒಂದು ದಿನ ವೆನೆಸ್ಸಾ ಕೆಲಸದಿಂದ ಹೊರಡುವ ಸಮಯಕ್ಕೆ ಸರಿಯಾಗಿ ಕಾಯುತ್ತಿದ್ದ ರಿಚಿ ಆಕೆಯನ್ನು ”
ಹೋಲಾ ವೆನೆಸ್ಸಾ, ಹೊಲಾ “ ಎಂದು ಕರೆದು ನಿಲ್ಲಿಸಿದ . “ಕ್ವೆಯೆರೋ ಹಬ್ಲ್ಯಾರ್ ಕಾನ್ ಉಸ್ಟಡ್” ಎಂದ.
ಎಂದರೆ, “ನಾನು ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು” ಎಂದು ಹೇಳಿದ. ಆಕೆ ಆಶ್ಚರ್ಯ ಚಕಿತಳಾಗಿ
ನೋಡಿದಳು, ತನಗಾಗಿ ಈತ ಸ್ಪ್ಯಾನಿಷ್ ಕಲಿತದ್ದನ್ನು ನೋಡಿ ಆಕೆ ಬೆರಗಾದಳು. ಆಕೆಯ ಪ್ರತ್ಯುತ್ತರಕ್ಕೂ
ಕಾಯದೆ
ರಿಚಿಯು: “ ಎಸ್ಟೋ ಏನಾಮೊರೊಡೊ ಡೇಟಿ” ಎಂದರೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು
ಹೇಳಿಯೇಬಿಟ್ಟ. ಆಕೆಯ ಕಣ್ಣಲ್ಲಿ ಅದಾಗಲೇ ನೀರು ತುಂಬಿಕೊಂಡಿತ್ತು, ಆಕೆ ರಿಚಿಯನ್ನು ಪಕ್ಕಕ್ಕೆ ಸರಿಸುತ್ತಾ
ಅಳುತ್ತಾ ಮುಂದೆ ನಡೆದಳು, ರಿಚಿಗೆ ಗಾಬರಿಯಾಯಿತು.
ತಾನೇ ಅವಸರಮಾಡಿಕೊಂಡು ಏನಾದರೂ ಹೆಚ್ಚುಕಮ್ಮಿ ಮಾತನಾಡಿಬಿಟ್ಟೆನಾ ಅಥವಾ ಆಕೆಯ
ಮನಸ್ಸಿಗೆ ನೋವು ಮಾಡಿದೆನಾ ಎಂದು ತಿಳಿಯಲಿಲ್ಲ. ಮತ್ತೆ ಆಕೆಯನ್ನು ಹಿಂಬಾಲಿಸುತ್ತ, ವೆನ್ನೆಸ್ಸಾ
ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ಆದರೆ ಏನಾದರೂ ಹೇಳಿ ಹೋಗು, ಹೀಗೆ ಏನೂ ಮಾತನಾಡದಿದ್ದರೆ
ನನಗೆ ಗಾಬರಿಯಾಗುತ್ತದೆ ಎಂದು ಗೋಗರೆದ. ಸ್ವಲ್ಪ ಮುಂದೆ ಹೋಗಿ ನಿಂತು ತನ್ನ ಮೊಬೈಲ್
ತೆಗೆದುಕೊಂಡು ಆಕೆ ಟೈಪ್ ಮಾಡಲು ಶುರು ಮಾಡಿದಳು , ರಿಚಿ ಯ ಫೋನಿಗೆ ಆಕೆಯ ಮೆಸೇಜ್ ಬಂತು,
ಆಕೆ ಹೀಗೆ ಬರೆದಿದ್ದಳು - “ನನಗೆ ಮಾತನಾಡಲು ಬರುವುದಿಲ್ಲ , ಹುಟ್ಟಿದಾಗಲಿಂದ ನಾನು ಮೂಕಿ, ಈ
ವಿಷಯ ತಿಳಿದರೆ ನೀನು ಎಲ್ಲಿ ನನ್ನಿಂದ ದೂರವಾಗುವೆ ಎಂದು ನಿನಗೆ ಹೇಳಿರಲಿಲ್ಲ, ನನ್ನನು ಇಷ್ಟ ಪಟ್ಟ
ಜನರೆಲ್ಲಾ ನನಗೆ ಮಾತನಾಡಲು ಬರುವುದಿಲ್ಲ ಎಂದು ತಿಳಿದ ತಕ್ಷಣ ನನ್ನನ್ನು ಬಿಟ್ಟು ಹೋಗುತ್ತಾರೆ,
ನೀನು ಕೂಡ ಈಗ ಅವರ ಹಾಗೆಯೇ ನನ್ನನ್ನು ಬಿಟ್ಟು ಹೋಗುವೆಯಾ ? “ ಎಂದು ಮೆಸೇಜ್ ಮಾಡಿದಳು.
ರಿಚಿ ಒಂದು ಕ್ಷಣ ದಿಗ್ಬ್ರಾಂತ ನಾಗಿ ನೋಡಿತ್ತಾ ನಿಂತ , ನಂತರ ಅವಳ ಹತ್ತಿರ ಹೋಗಿ ಆಕೆಯ ಕೈಯನ್ನು
ಹಿಡಿದು ಹೇಳಿದ, “ ಜಗತ್ತು ಮಾತನಾಡುವ ಒಂದೇ ಒಂದು ಭಾಷೆ ಎಂದರೆ ಅದು ಪ್ರೀತಿ, ಪ್ರೀತಿ ಇಂದ
ಪ್ರಾಣಿ ಪಕ್ಷಿ ಮರ ಗಿಡ ಪರಿಸರ ಯಾವುದರ ಜೊತೆಗಾದರೂ ಮಾತನಾಡಬಹುದು, ಪ್ರೀತಿ ಅತ್ಯಂತ
ಪ್ರಭಲವಾದ ಭಾಷೆ ಹಾಗು ಅದೇ ನಮ್ಮ ಶಕ್ತಿ , ನಮ್ಮಿಬ್ಬರ ನಡುವೆ ಅಂತಹ ಪ್ರೀತಿ ಇರುವಾಗ ನಾನು
ಎಂದಿಗೂ ನಿನ್ನನ್ನು ಬಿಟ್ಟು ಹೋಗುವುದಿಲ್ಲ, ಕೆಲವೇ ದಿನಗಳಲ್ಲಿ ಸ್ಪ್ಯಾನಿಷ್ ಕಲಿತಿರುವ ನಾನು, ಸೈನ್
ಲ್ಯಾಂಗ್ವೇಜ್ (ಸನ್ನೆ ನುಡಿ) ಕಲಿಯುವುದು ಯಾವ ಮಹಾ ಕೆಲಸ, ನಮ್ಮಿಬ್ಬರಿಗೂ ನಮ್ಮ ನಮ್ಮ
ಭಾವನೆಗಳು ಮಾತಿಲ್ಲದೆಯೇ ಅರ್ಥವಾಗುತ್ತದೆ, ಅಂತಹುದರಲ್ಲಿ ಭಾಷೆ ಅಥವಾ ಮಾತುಗಳು
ಬೇಕಾಗುವುದೇ ಇಲ್ಲ. ನೀನು ನನ್ನವಳು ವೆನೆಸ್ಸಾ ಎನ್ನುತ್ತಾ ಆಕೆಯನ್ನು ಬಿಗಿಯಾಗಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟನು.
-LSS
Comments
Post a Comment