ತಿರುವು

ದಿನಾಂಕ ಸೆಪ್ಟೆಂಬರ್ 3 , ನನ್ನ ಜೀವನದ ಅತ್ಯಂತ ಕೆಟ್ಟ ದಿವಸ , ಸಮಯ ರಾತ್ರಿ ಸುಮಾರು 10.30 ಆಗಿತ್ತು , ದಟ್ಟವಾದ ಮೋಡ ಕವಿದು ಮೆಲ್ಲನೆ ಮಳೆ ಹನಿಯಲು ಶುರುವಾಗಿತ್ತು , ನನಗೆ ಅದಾಗಲೇ ಗೊತ್ತಿತ್ತು , ಮನೆಗೆ ಹೋದ ಮೇಲೆ ಏನೇನು ಮಾತನಾಡುತ್ತಾರೆ , ಹೇಗೆಲ್ಲ ಬೈಯುತ್ತಾರೆ ಅಂತ , ಮೊದಲೇ ನನ್ನ ಸ್ವಂತದ ತೊಂದರೆಗಳಿಂದ ತಲೆ ಕೆಟ್ಟು ಹೋಗಿತ್ತು .
ನಮ್ಮ ಮನೆಯ ರಸ್ತೆಗೆ  ಬರುತ್ತಿದ್ದಂತೆ ನಮ್ಮ ರಸ್ತೆಯ ನಾಯಿ ಟೈಗರ್,  ಬಳಿಗೆ  ಓಡಿಬಂದಿತ್ತು , ಹೆಸರಿಗೆ ಮಾತ್ರ ಟೈಗರ್ ಆದರೆ ಒಣಕಲು ದೇಹ , ಪುಕ್ಕಲು ಸ್ವಭಾವ ಅದರ ಹೆಸರಿಗೆ ವಿರುದ್ಧವಾಗಿತ್ತು . ನಾನು ಮನೆಗೆ ಬರುವುದು ಖುಷಿ ಕೊಡುತ್ತಿದ್ದುದು ಅದಕ್ಕೆ ಮಾತ್ರ ಅನ್ನಿಸುತ್ತದೆ , ಪ್ರೀತಿಯಿಂದ ನನ್ನ ಬೈಕ್ ಹತ್ತಿರ ಬಂದು ಅದರದೇ ಭಾಷೆಯಲ್ಲಿ ನನ್ನ ಮಾತನಾಡಿಸುತ್ತಿತ್ತು. ಆದರೆ ಇಂದು ಅದನ್ನು ಮಾತನಾಡಿಸುವ ಅಥವಾ ಮುದ್ದಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ , ಅದರೆಡೆಗೆ ನೋಡಲು ಇಲ್ಲ , ನನ್ನ ಬೈಕ್ ನಿಲ್ಲಿಸಿ ಸೀದಾ ಮನೆಗೆ ಹೊರಟೆ
ಅಮ್ಮ ಬಾಗಿಲು ತೆರೆದರು , ಸೀದಾ ಒಳಗಡೆ ಹೋಗಿ ಸೋಫಾ ಮೇಲೆ ಕುಳಿತುಕೊಂಡೆ , "ಊಟಕ್ಕೆ ಬಾರೋ " ಎಂದು ಕರೆದರು, ನಾನು "ಬೇಡ , ನನಗೆ ಹಸಿವಾಗಿಲ್ಲ " ಎಂದೆ ಅಷ್ಟೇ , ಅಲ್ಲಿಗೆ ಶುರುವಾಯಿತು "ದಿನಾ ಮನೆಗೆ ಬರುವುದು ರಾತ್ರಿ 10 ಆದ ಮೇಲೆಯೇ , ಕಾಲೇಜು ಮುಗಿಸಿಕೊಂಡು ಅದೆಲ್ಲಿಗೆ ಅಲಿಯೋಕೆ ಹೋಗುತ್ತಿಯೋ  ? ಇಲ್ಲಿ ನಿನಗೋಸ್ಕರ ಕಾದುಕೊಂಡು ಉಪವಾಸ ಕೂತಿರ್ತೀವಿ  , ನಿನಗೆ ನಮ್ಮ ಮೇಲೆ ಗಮನವೇ ಇಲ್ಲ , ಎಲ್ಲಂದ್ರಲ್ಲಿ ಏನಂದ್ರೆ ಅದನ್ನ ತಿಂದುಕೊಂಡು ಬರ್ತೀಯ , ಓದಲ್ಲ ಬರಿಯಲ್ಲ , ಯಾವಾಗ ನೋಡಿದ್ರು ಫ್ರೆಂಡ್ಸ್, ಗರ್ಲ್ ಫ್ರೆಂಡ್ಸ್ ಅಂತ ತಿರುಗ್ತಾ ಇರ್ತಿಯ , ಆ ಹುಡುಗಿ ಶಾಲಿನಿ ಸಹವಾಸ ಮಾಡಿಕೊಂಡು ಊರೆಲ್ಲ ಸುತ್ತುತ್ತೀಯಾ , ನಿಮ್ಮಪ್ಪ ದುಡಿದು ಇಟ್ಟಿರೋ  ದುಡ್ಡನ್ನೆಲ್ಲ ಹಾಳು  ಮಾಡ್ತಿಯಾ,ಹೆತ್ತ ತಾಯಿ ಹೊಟ್ಟೆ ಉರಿಸುತ್ತೀಯಾ , ನಿಂದು ಒಂದು ಜನ್ಮನಾ ?" , ಒಂದೇ ಉಸಿರಲ್ಲಿ ಇಷ್ಟೆಲ್ಲಾ ಬೈದು ಸುಮ್ಮನಾದ್ರು ಅಮ್ಮ . ಇದೀಗ ಅಪ್ಪನ ಸರದಿ , ಅಮ್ಮನನ್ನು ಬೈಯುತ್ತಾ "ಒಬ್ಬನೇ ಮಗ ಅಂತ ಮುದ್ದು ಮಾಡಿ ಹಾಳು ಮಾಡ್ದೆ ಅವನನ್ನ , ಈಗ ಅನುಭವಿಸು  , ಇವನ ಬದುಕೇ ಕಿತ್ತು ಹೋಗಿದೆ ಅಂಥದರಲ್ಲಿ ಇವನಿಗೆ ಒಬ್ಬಳು ಗರ್ಲ್ ಫ್ರೆಂಡ್ ಬೇರೆ ಕೇಡು ,ಮದುವೆ ಮಾಡಿಕೊಂಡ್ರೆ ಅವಳನ್ನು ಸಾಕುವ ಯೋಗ್ಯತೆ ಇಲ್ಲ , ಇವನಿಗೆ , ಇಂಥವರಿಗೆ ಇವೆಲ್ಲ ಶೋಕಿ ಬೇಕಾ ?"

ಅಪ್ಪ ಇನ್ನು ಮಾತಾಡುತ್ತಲೇ ಇದ್ದರು , ನನಗೆ ಒಂದು ಕ್ಷಣ ಅಲ್ಲಿರಲಾಗಲಿಲ್ಲ , ಸೀದಾ ಮೇಲಿನ ಮಹಡಿಯ ನನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡೆ , ಮೊದಲೇ ತಲೆಯಲ್ಲಿ ನನ್ನ ಸ್ವಂತದ ತೊಂದರೆಗಳು  , ಆದಾಗ ತಾನೇ ಶಾಲಿನಿಯೊಡನೆ ಜಗಳವಾಡಿ  ಬಂದಿದ್ದೆ ,ಸಣ್ಣ ಪುಟ್ಟ ಜಗಳಗಳು ಯಾವಾಗಲೂ ನಡೆಯುತ್ತಲೇ ಇರುತ್ತಿದ್ದವು , ಆದರೆ ಅಂದಿನ ಜಗಳ ಬಹುಶಹ ನಮ್ಮಿಬ್ಬರ ಪ್ರೀತಿಯನ್ನು ಕೊನೆಗೊಳಿಸುವ ಹಂತಕ್ಕೆ ತಲುಪಿತ್ತು .

ನನ್ನ ಮತ್ತು ಶಾಲಿನಿಯ ಪ್ರೇಮ ಶುರುವಾಗಿದ್ದು ಸುಮಾರು ಮೂರು ವರ್ಷಗಳ ಹಿಂದೆ , ಮೊದಲನೇ ವರ್ಷದ ಪದವಿಯಲ್ಲಿ ಆರಂಭವಾಗಿದ್ದ ಪ್ರೇಮಕಥೆ ಕೊನೆಯ ವರ್ಷ ಮುಗಿಯುವಷ್ಟರಲ್ಲಿ ಕೊನೆಯ ಹಂತ ತಲುಪಿತ್ತು , ನಮ್ಮ ಪ್ರತಿ  ನಿತ್ಯದ ಜಗಳಕ್ಕೆ ಕಾರಣ ಶಾಲಿನಿಯ ಹಠ ಸ್ವಭಾವ ಮತ್ತು ನನ್ನ ಆಲಸ್ಯತನ.

ಮೊದಮೊದಲು ಅವಳ ಹಠ ಸ್ವಭಾವ ನನಗೆ ಇಷ್ಟವಾಗುತ್ತಿತ್ತು ,ಏಕೆಂದರೆ ಅವಳ ಹಠ ಸ್ವಭಾವದಿಂದ ಜೀವನದಲ್ಲಿ ಬೇಕಾದನ್ನೆಲ್ಲ ಸಾಧಿಸುತ್ತಿದ್ದಳು , ಎಲ್ಲ ವಿಷಯದಲ್ಲೂ , ಓದಿನಲ್ಲೂ , ಬೇರೆಯ ಚಟುವಟಿಕೆಯಲ್ಲೂ . ಮೊದಮೊದಲು ಅವಳಿಗೂ ನನ್ನ ಆಲಸ್ಯತನ , ತುಂಟತನ ಎಲ್ಲವೂ ಹಿಡಿಸುತ್ತಿತ್ತು .

ದಿನ ಕಳೆದಂತೆ  ಯಾವಾಗ , ಪ್ರತಿ ವಿಷಯದಲ್ಲೂ ಕೇವಲ ತನ್ನ ಮಾತೇ ನಡೆಯಬೇಕು , ಅವಳು ಹೇಳಿದಂತೆಯೇ ನಾನು ಕೇಳಬೇಕು ಎಂದೆಲ್ಲ ಹಠ ಹಿಡಿದಳೋ ಆಗ ಸ್ವಲ್ಪ ಸ್ವಲ್ಪವೇ  ನಮ್ಮಲ್ಲಿ ಬಿರುಕು ಉಂಟಾಯಿತು.

ಆದರೂ ನಾನವಳ ಪ್ರತಿ ಮಾತನ್ನು ಕೇಳುತ್ತಿದ್ದೆ , ಕಾಲೇಜಿನಿಂದ ಪಿಕ್ಅಪ್ , ಹಾಸ್ಟೆಲ್ ಗೆ ಡ್ರಾಪ್ ಮಾಡುತ್ತಿದ್ದೆ , ಅವಳನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದೆ , ಅವಳನ್ನು ಖುಷಿಪಡಿಸಲು ಏನೆಲ್ಲ ಮಾಡಿದ್ದೇನೆ ,  ಅವಳಿಗೆ ಬೇಸರವಾದಾಗ ಸಮಾಧಾನ ವಾಗುವ ವರೆಗೂ ಅವಳ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುತ್ತಿದ್ದೆ . ಅವಳಿಗೋಸ್ಕರ ನನ್ನ ಸ್ನೇಹಿತರಿಂದ  ದೂರವಿರುತ್ತಿದ್ದೆ . ಇವೆಲ್ಲದರ ಪರಿಣಾಮವಾಗಿ ನನ್ನ ಭವಿಷ್ಯವನ್ನು ಮರೆತೇ ಬಿಟ್ಟಿದ್ದೆ , ಆದರೆ ಅವಳು ಜಾಣೆ , ನನ್ನ ರೀತಿ ಮಾಡಲಿಲ್ಲ ಹಟದಿಂದ ಓದಿ ಬರೆದು ಕೆಲಸವನ್ನು ಗಿಟ್ಟಿಸಿಕೊಂಡಳು , ಅದ್ಯಾವಾಗೋ ಒಮ್ಮೆ ಜ್ಞಾನೋದಯವಾದಂತೆ ನನಗೆ ಕೇಳಿದಳು ,"ನೀನು ಏಕೆ ಚೆನ್ನಾಗಿ ಓದುವುದಿಲ್ಲ ? , ಯಾಕೆ ನಿನಗೆ ಒಂದು ಕೆಲಸವೂ ಸಿಗುವುದಿಲ್ಲ ? " ಎಂದು . ಈ ಪ್ರಶ್ನೆಗೆ ಸ್ವತಃ ನನ್ನ ಹತ್ತಿರವೂ ಉತ್ತರವಿರಲಿಲ್ಲ , ಅದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದಳು , ಕ್ರಮೇಣ ಅದೇ ವಿಷಯದಿಂದ ನಮ್ಮ ಮಧ್ಯೆ ಜಗಳವಾಗುತ್ತಿತ್ತು ,ಅಂದು ಕೂಡ ಇದೇ ವಿಷಯಕ್ಕೆ ಜಗಳವಾಯಿತು , ನಾನು ಚೆನ್ನಾಗಿ ಬೈದು ಬಂದಿದ್ದೆ , ಅವಳು ನನ್ನ ಮುಂದೆ ಕೂತು ಅತ್ತಿದ್ದಳು.

ನನ್ನ ಶೂನ್ಯ ಭವಿಷ್ಯ , ನಾನು ಅವಳನ್ನು ಬೈದದ್ದು , ಅವಳು ನನ್ನಿಂದ ಅತ್ತಿದ್ದು , ಅಪ್ಪ ಅಮ್ಮನ ಮಾತುಗಳು , ಎಲ್ಲ ಸೇರಿ ತಲೆ ಕೆಟ್ಟು ಹೋಗಿತ್ತು , ಹುಚ್ಚು ಹಿಡಿದಂತೆ ಆಗುತ್ತಿತ್ತು , ನನ್ನ ಬದುಕು ನನಗೇ ಅಸಹ್ಯ ವೆನಿಸಿತು , 10 ರೂಪಾಯಿಯ ಸಿಗರೇಟಿನಿಂದ ಹಿಡಿದು , ಬೈಕ್ ನ ಪೆಟ್ರೋಲ್ ಗೆ ಎಲ್ಲದ್ದಕ್ಕೂ ಅಪ್ಪನ ಮುಂದೆ ಸ್ವಾಭಿಮಾನ ಬಿಟ್ಟು ಕೈ ಚಾಚ ಬೇಕಿತ್ತು  , ಅವರು ಬೈದು ಕೊಟ್ಟ ಹಣವನ್ನು ಶಾಲಿನಿಗಾಗಿ ಖರ್ಚು ಮಾಡಿದ ಮೇಲೂ ಅವಳ ಹತ್ತಿರವೂ ಬೈಸಿಕೊಳ್ಳಬೇಕಿತ್ತು , ನನ್ನ ಕಾಲಮೇಲೆ ನಾನೇ ನಿಂತುಕೊಳ್ಳೋಣ ಎಂದರೆ ನನ್ನ ವಿದ್ಯಾಭ್ಯಾಸ , ಗಳಿಸಿದ ಅಂಕಕ್ಕೆ ಕೆಲಸ ಸಿಗುವುದು ಅತ್ಯಂತ ಕಷ್ಟಕರವಾಗಿತ್ತು .
ಆ ಕ್ಷಣಕ್ಕೆ ಏನು ಮಾಡುವುದು ಎಂದು ಗೊತ್ತಾಗಲಿಲ್ಲ , ನನ್ನನ್ನು ನಾನು ನಿಯಂತ್ರಿಸಲು ಆಗಲಿಲ್ಲ , ಕೋಪದಿಂದ ಜೋರಾಗಿ ಮೊಬೈಲ್ ಅನ್ನು ಬಿಸಾಡಿದೆ , ಕೈಯ್ಯನ್ನು ಬಲವಾಗಿ ಗೋಡೆಗೆ ಗುದ್ದಿದೆ , ಸೀದಾ ಬಾಲ್ಕನಿ ಗೆ ಹೋದೆ , ಮಳೆ  ಜೋರಾಗಿ ಗುಡುಗು ಮಿಂಚಿನ ಸಮೇತ ಬರುತ್ತಿತ್ತು , ಅಲ್ಲಿಯೇ ಕುರ್ಚಿಯೊಂದರಲ್ಲಿಅಮ್ಮನ ಸೀರೆ ಹರವಿ ಹಾಕಿದ್ದರು . ಅದನ್ನು ನನ್ನ ರೂಮಿಗೆ ತಂದು ಪ್ಯಾನಿಗೆ ಗಂಟು ಕಟ್ಟಿದೆ. ಅಲ್ಲೇ ಇದ್ದ ಒಂದು ಹಾಳೆಯಲ್ಲಿ ಬರೆದೆ "ನನ್ನ ಸಾವಿಗೆ ನಾನೇ ಕಾರಣ " ಎಂದು, ಬರೆಯುವಾಗ ಬೆರಳುಗಳು ನಡುಗುತ್ತಿತ್ತು , ಹೃದಯ ಬಡಿತ ಹೆಚ್ಚಾಗುತ್ತಿತ್ತು , ನನ್ನ ಮೇಲೆ ನನಗೆ ನಿಯಂತ್ರಣವಿರಲಿಲ್ಲ ,ನೇಣು ಹಾಕಿಕೊಳ್ಳಲಾ ? ಬೇಡವಾ ? ನಾನು ಮಾಡುತ್ತಿರುವುದು ತಪ್ಪಾ ? ಬದುಕಿದ್ದು ಏನು ಮಾಡಲು ನನ್ನಿಂದ ಆಗುವುದಿಲ್ಲ , ನಾನು ಯಾರಿಗೂ ಬೇಡವಾದೆನಾ ? ನಾನು ಇಂದು ಸತ್ತರೆ ನನ್ನ ತಂದೆ ತಾಯಿಯನ್ನು ನೋಡಿಕೊಳ್ಳುವವರು ಯಾರು ? ನನ್ನ ಶಾಲಿನಿ ? ಹೀಗೆಲ್ಲ ಮನಸ್ಸಿನ ಧಾಟಿ ಎಲ್ಲೆಲ್ಲಿಗೂ ಸಾಗುತ್ತಿತ್ತು ,   ಮೊದಲೇ ಮಾನಸಿಕ ವಾಗಿ ಬಳಲಿದ್ದೆ , ದೈಹಿಕವಾಗಿಯೂ ಸುಸ್ತಾಗಿದ್ದೆ , ಕೊಂಚ ಮಂಪರು ಹತ್ತಿತು , ನಿದ್ರಾದೇವಿ ಮೆಲ್ಲನೆ ನನ್ನನ್ನು ಆವರಿಸಿದ್ದಳು .
ನಿದ್ರೆಯಲ್ಲಿ ಸಣ್ಣ ಕನಸೊಂದನ್ನು ಕಂಡೆ , ಆ ಕನಸಿನಲ್ಲಿ ನಾನು ನನ್ನ ಮನೆಯ ಕಡೆಗೆ ನೋಡುತ್ತಾ ಗೇಟಿನ ಮುಂದೆ ನಿಂತಿದ್ದೆ ,ನಮ್ಮ ರಸ್ತೆಯ ಟೈಗರ್ ಗೇಟ್ ಬಳಿಯಲ್ಲಿ ಕೂತು ತನ್ನ ಮುಂಗಾಲುಗಳ ಮೇಲೆ ತಲೆಯನ್ನಿರಿಸಿ ಬಾಗಿಲನ್ನು ನೋಡುತ್ತಾ ಕುಳಿತಿತ್ತು ,ನಮ್ಮ  ಹಳ್ಳಿಯಿಂದ ನನ್ನ ಅಜ್ಜಿ , ತಾತ ಮತ್ತು ಚಿಕ್ಕಪ್ಪನ ಕುಟುಂಬ ಎಲ್ಲರು ಬಂದಿದ್ದರು , ಅವರೆಲ್ಲ ಹಳ್ಳಿ ಬಿಟ್ಟು ಪೇಟೆಗೆ ಬರುವುದು ಬಹಳ ಅಪರೂಪ , ಅವರೆಲ್ಲ ಯಾಕೆ  ಬಂದಿದ್ದಾರೆ ಎಂದುಕೊಳ್ಳುತ್ತಾ ಮನೆಯ ಅಂಗಳಕ್ಕೆ ಬಂದರೆ, ಅಲ್ಲಿ ನನ್ನ ಅಮ್ಮ ಅಪ್ಪನನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾರೆ  " ನಾನು ಮೊದಲು ಸಾಯಬೇಕು , ನನ್ನ ಮಗನನ್ನು ಬಯ್ದು ಸಾಯಿಸಿದ ಪಾಪಿ ನಾನು , ನಾನು ಮೊದಲು ಸಾಯಬೇಕು " ಎಂದು ಅರಚಾಡುತ್ತಿದ್ದರು , ನನ್ನ ತಂದೆ "ಅಳಬೇಡ , ಅವನೇ ನಮಗೆ ದ್ರೋಹಮಾಡಿ ಹೋಗಿದ್ದಾನೆ , ಅವನಿಗಾಗಿ ನಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದೆವು  , ಆದರೆ ಅವನು ನಮ್ಮನ್ನು ಬಿಟ್ಟು ಹೋಗಿದ್ದಾನೆ , ನಮಗೊಬ್ಬ ಮಗ ಇದ್ದ ಎನ್ನುವುದನ್ನೇ ಮರೆತುಬಿಡೋಣ " ಎನ್ನುತ್ತಾ ಸಮಾಧಾನ ಮಾಡುತ್ತಿದ್ದರು .
ಇವರ ಮಾತುಗಳು ತುಂಬಾ ವಿಚಿತ್ರ ಎನಿಸಿತು , ಹಾಗೆ ಹೆಜ್ಜೆ ಇಟ್ಟು ಮನೆಯೊಳಗೆ ನಡೆದರೆ ಆಘಾತ ಒಂದು ಕಾದಿತ್ತು , ಅಲ್ಲಿಯೇ ಬಿಳಿಯ ಬಟ್ಟೆಯಲ್ಲಿ ಶವವೊಂದನ್ನು ಸುತ್ತಿ ಇಟ್ಟಿದ್ದರು , ಹತ್ತಿರ ಹೋಗಿ ದಿಟ್ಟಿಸಿ ನೋಡಿದರೆ ಅದು ನಾನೇ ಆಗಿದ್ದೆ , ಒಂದು ಕ್ಷಣ ಭಯವಾಯಿತು , ಅಲ್ಲಿಯೇ ನನ್ನ ಪಕ್ಕ ಶಾಲಿನಿ ಅಳುತ್ತಾ ಕುಳಿತಿದ್ದಳು , ಮನೆಯಲ್ಲಿ ನೀರವ ಮೌನ , ಸೂತಕದ ಛಾಯೆ , ನೆಂಟರು , ಗೆಳೆಯರು ಒಬ್ಬೊಬ್ಬರಾಗಿಯೇ ನೋಡಿಕೊಂಡು ಹೋಗುತ್ತಿದ್ದಾರೆ , ಶಾಸ್ತ್ರಿಯೊಬ್ಬರು ಅಲ್ಲಿಯೇ ಕಾರ್ಯಕ್ಕೆ ಅಣಿಮಾಡಿಕೊಳ್ಳುತ್ತಿದ್ದಾರೆ . ನನ್ನ ಸಂಭಂದಿಕರನ್ನು ಕರೆದು ಶವವನ್ನು ತೆಗೆದುಕೊಂಡು ಹೋಗಲು ತಯಾರಾಗಿ ಎಂದು ಹೇಳಿದರು , ನನ್ನ ತಾಯಿ ತಕ್ಷಣ ನನ್ನ ಕಾಲನ್ನು ಹಿಡಿದು ನನ್ನ ಮಗನನ್ನು ಎಲ್ಲಿಗೂ   ಕರೆದುಕೊಂಡು ಹೋಗಬೇಡಿ , ಬಿಡಿ ಅವನನ್ನು ಎಂದು ಜೋರಾಗಿ ಕಿರುಚಿದರು , ಈ ಎಲ್ಲವನ್ನು ಕನಸಲ್ಲಿ ನೋಡ್ದುತ್ತಿದ್ದ ನನಗೆ ಭಯವಾಗಿ ,ತಕ್ಷಣ ನಿದ್ರೆಯಿಂದ  ಎಚ್ಚರವಾಯಿತು .

ಒಂದೆರಡು ನಿಮಿಷ ಸುತ್ತ ಮುತ್ತ ನೋಡಿದೆ , ನಾನು ಎಲ್ಲಿದ್ದೇನೆ ಎಂಬುದನ್ನು ಅರಿತೆ , ಅತ್ಯಂತ ಭಯ ಭೀತನಾಗಿದ್ದರಿಂದ ಮೈಯೆಲ್ಲಾ ಬೆವರುತ್ತಿತ್ತು, ಹೃದಯ ಬಡಿತ ಏರುಪೇರಾಗಿತ್ತು , ಉಸಿರು ಧೀರ್ಘವಾಗಿತ್ತು    , ನಿಧಾನವಾಗಿ ವಾಸ್ತವ ಪ್ರಪಂಚಕ್ಕೆ ಹಿಂದಿರುಗಿದೆ , ಇದೆಲ್ಲ ಒಂದು ಕನಸು ಎಂಬುದು ತಿಳಿಯಿತು , ಸ್ವಲ್ಪ ಸಮಾಧಾನವಾಯಿತು , ಕಿಟಕಿಯಿಂದ ಹೊರಗೆ ನೋಡಿದರೆ ಅದಾಗಲೇ ಬೆಳಕಾಗಿತ್ತು , ನಿನ್ನೆ ರಾತ್ರಿಯಿಂದ ಜೋರಾಗಿ ಬರುತ್ತಿದ್ದ ಮಳೆ ಆಗ ತಾನೇ ನಿಂತು ವಾತಾವರಣ  ಪ್ರಶಾಂತವಾಗಿತ್ತು ,
ತಂಗಾಳಿ ಬೀಸುತ್ತಿತ್ತು , ಟೇಬಲ್ ಮೇಲಿದ್ದ ಕಾಗದ ನೋಡಿದೆ "ನನ್ನ ಸಾವಿಗೆ ನಾನೇ ಕಾರಣ " ಎಂದು ಬರೆಯಲಾಗಿತ್ತು , ಅದನ್ನು ತಕ್ಷಣ ಹರಿದುಹಾಕಿ , ರೂಮ್ ನಿಂದ ಹೊರಗೆ ಹೋಗಿ ಅಮ್ಮನನ್ನು ಹುಡುಕಿದೆ.
ಅಮ್ಮ ಅಂಗಳದಲ್ಲಿ ಪೇಪರ್ ಓದುತ್ತಾ ಕುಳಿತಿದ್ದರು  , ಅಪ್ಪ ಅಲ್ಲಿಯೇ ಗಾರ್ಡನ್ ನಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದರು , ಹೋಗಿ ಅಮ್ಮನ ಮಡಿಲಲ್ಲಿ  ತಲೆ ಇಟ್ಟು ಮಲಗಿದೆ , "ಏನಿವತ್ತು ನನ್ನ ಮಗ ಇಷ್ಟು ಬೇಗ ಎದ್ದು ಬಿಟ್ಟಿದ್ದಾನೆ , ಸೂರ್ಯ ಯಾವ ದಿಕ್ಕಿನಲ್ಲಿ ಹುಟ್ಟಿದೆ ಇವತ್ತು ? ಎನ್ನುತ್ತಾ ಗೇಲಿಮಾಡಿದರು " , ಅದಕ್ಕೆ ಅಪ್ಪ " ಶಾಲಿನಿಯನ್ನು ಕರೆದುಕೊಂಡು ಮಾರ್ನಿಂಗ್ ಶೋ ಸಿನೆಮಾ ನೋಡೋಕೆ ಹೋಗ್ತಾ ಇದಾನೆ ಅನ್ನಿಸುತ್ತೆ " ಎನ್ನುತ್ತಾ ನಗುತ್ತಿದ್ದರು ,

ಒಂದು ಕ್ಷಣ ಯೋಚಿಸಿದೆ , ನನಗೆ ಜೀವನ ನೀಡಿರುವ , ನನ್ನನ್ನು ಇಷ್ಟು ಪ್ರೀತಿಸುವ ತಂದೆ , ತಾಯಿ ,ಎಲ್ಲ ರೀತಿಯ ಸವಲತ್ತುಗಳು , ಆರೋಗ್ಯವಾದ ದೇಹ , ಬಿಸಿ ರಕ್ತದ ವಯಸ್ಸು , ಇಷ್ಟು ಚೆನ್ನಾಗಿರುವ ನನ್ನ ಸುತ್ತಲಿನ ಜಗತ್ತು, ಇಷ್ಟೆಲ್ಲಾ ಚೆನ್ನಾಗಿರುವ ಜೀವನವನ್ನು ಒಂದು ಕ್ಷಣದ ಒತ್ತಡ , ಬೇಸರದಿಂದ ಎಂತಹ ಅನಾಹುತ ಮಾಡಿಕೊಳ್ಳುತ್ತಿದ್ದೆ , ಸದ್ಯ ಅದೃಷ್ಟ ಚೆನ್ನಾಗಿದ್ದುದರಿಂದ  ಯಾವುದೇ ಅನಾಹುತ ವಾಗಲಿಲ್ಲ . ನನಗೆ ಹೊಸ  ಜೀವನ ಸಿಕ್ಕಿದಂತಾಗಿದೆ , ಸಿಕ್ಕಿರುವ ಜೀವನವನ್ನು ಮನಸಾರೆ ಜೀವಿಸುತ್ತೇನೆ , ಪ್ರತಿಯೊಂದು ಕ್ಷಣವನ್ನು ಆಸ್ವಾದಿಸುತ್ತೀನಿ , ನನ್ನ ತಂದೆ ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವಂತೆ ಬಾಳುತ್ತೇನೆ.


                                                                                                                          -LSS










Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ