ಒಂದು ಹಣ್ಣಿನ / ಹೆಣ್ಣಿನ ಕಥೆ !
ಸಿರಿವಂತನ ಮಗನ ಹಸಿವನ್ನು ನೀಗಿಸಿ
ಉದರಾಗ್ನಿಯನ್ನು ಶಾಂತವಾಗಿಸಿತ್ತು ಆ ಹಣ್ಣು/ಹೆಣ್ಣು
ತನ್ನ ಹಸಿವು ನೀಗಿದ ನಂತರ, ಅರ್ಧ ತಿಂದು ಮುಗಿಸಿದ ನಂತರ
ರಸ್ತೆ ಬದಿಯಲ್ಲಿ ಬಿಸಾಡಿ ಹೊರಟ ಅವನು
ಆ ಹಣ್ಣಿನ / ಹೆಣ್ಣಿನ ಒಡಲಲ್ಲಿತ್ತು ಪ್ರಪಂಚ ಕಾಣದ ಬೀಜ ಒಂದು
ಹೊಸಕಿ ಹಾಕಲೇ ,ಬದುಕು ನೀಡಲೇ ಎಂಬ ಗೊಂದಲದಲ್ಲಿ ಜೀವ ಬಲಿತಾಗಿತ್ತು
ಪ್ರಪ್ರಂಚವ ಕಾಣದ ಮುಗ್ಧ ಜೀವವನ್ನು ನೆನೆದು ,
ಹೊಸ ಭವಿಷ್ಯವ ಹೊತ್ತ ಬದುಕನ್ನು ಸಾಯಿಸಲು ಮನಸ್ಸಾಗಲಿಲ್ಲ
ಜೀವದ ಧ್ಯೇಯವೆಂಬಂತೆ , ಉಸಿರನ್ನು ಬಸಿದು
ಫಲವತ್ತಾದ ಭೂಮಿಯನ್ನು ಕಂಡುಕೊಂಡಳು
ನೆರೆಹೊರೆಯವರಿಗೆ ಹೆದರಲಿಲ್ಲ , ಬಿರುಗಾಳಿಗೆ ಬೆದರಲಿಲ್ಲ
ಧೃಡ ಮನಸ್ಸಿನಿಂದ ಬೇರುಗಳ ಆಳಕ್ಕೆ ಚಾಚುತ್ತಾ ಪ್ರಪಂಚವ ತಿಳಿದಳು
ತುಂತುರು ಮಳೆಯಿಂದ , ಸೂರ್ಯನ ಶಾಖದಿಂದ
ಹಣ್ಣಿನ / ಹೆಣ್ಣಿನ ಧೃಡತೆಯಿಂದ ,ಕೊನೆಗೊಂದು ದಿನ ಜೀವ ಟಿಸಿಲೊಡೆದಿತ್ತು
ನಿಷ್ಕಲ್ಮಶ ಬುದ್ದಿಯ , ಮುಗ್ಧ ಮನಸ್ಸಿನ
ಹೊಸ ಜೀವವೊಂದು ಪ್ರಪಂಚದಲ್ಲಿ ಹುಟ್ಟಿತ್ತು
-LSS
Comments
Post a Comment