ಒಟ್ಟಿಗೆ ಸಾಗೋಣ .... !!
ಆಗಸವು ಶತಮಾನಗಳಿಂದ ಬಗ್ಗಿ ನೋಡುತ್ತಾ
ಏನನ್ನೋ ಹುಡುಕುತ್ತಿದೆ
ಅನಾಥಾಶ್ರಮದ ಮಗುವೊಂದು ವರ್ಷಗಳಿಂದ
ತನ್ನವರನ್ನು ಹುಡುಕುತ್ತಿರುವಂತೆ
ಸಮುದ್ರ ,ತನ್ನ ಅಲೆಗಳನ್ನು ಕಳುಹಿಸುತ್ತಾ ಕಂಡಕಂಡವರ
ಕಾಲ್ತೊಳೆಯುತ್ತಾ ಯಾರಿಗೋ ಕಾಯುತ್ತಿದೆ
ವೃದ್ಧಾಶ್ರಮದ ಹಿರಿಯ ಜೀವ ,ಪತ್ರಗಳನ್ನು ಕಳುಹಿಸುತ್ತಾ
ತನ್ನವರಿಗಾಗಿ ಕಾಯುತ್ತಿರುವಂತೆ
ದಟ್ಟ ಕಾನನದ ಹಸಿರು ಮರಗಳು ಬಾನತ್ತ ಕೈ ಚಾಚಿ
ಯಾರಿಗಾಗಿಯೋ ಹಾತೊರೆಯುತ್ತಿದೆ
ಸಣ್ಣ ಜಗಳಕ್ಕೆ ಮುರಿದ ಸಂಬಧವ ನೆನೆದು ಆಲಿಂಗನಕ್ಕೆ
ಯುವತಿ ಹಾತೊರೆಯುತ್ತಿರುವಂತೆ
ಶಾಂತವಾದ ನದಿಯು ಯಾವುದೋ ಉದ್ವೇಗಕ್ಕೆ ಒಳಗಾಗಿ
ಜಲಪಾತದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ
ಹತಾಶೆ ಸೋಲುಗಳಿಂದ ಉದ್ವೇಗಕ್ಕೆ ಒಳಗಾಗಿ
ಬಲಿಯಾಗುತ್ತಿರುವ ಯುವ ಸಮುದಾಯದಂತೆ
ಪ್ರಕೃತಿಯ ಸಂತೈಸಲು ಸಾಧ್ಯವಿಲ್ಲ , ಸಮಾಧಾನಿಸಲು ಶಕ್ಯರಲ್ಲ
ಪ್ರೀತಿ ತೋರಿಸಿ ಪ್ರಕೃತಿಯ ಬದಲಾಯಿಸಲು ಸಾಧ್ಯವಿಲ್ಲ
ಮನುಷ್ಯರನ್ನು ಸಂತೈಸಲು ಸಾಧ್ಯವಿದೆ , ಸಮಾಧಾನಿಸಲು ಅವಕಾಶವಿದೆ
ಪ್ರೀತಿತೋರಿಸಿ ಮನಸ್ಸನ್ನು ಬದಲಾಯಿಸುವುದು ಸಾಧ್ಯವಿದೆ
ಪ್ರೀತಿಸೋಣ ,ಆಲಂಗಿಸೋಣ ,ದುಃಖದಲ್ಲಿರುವವರಿಗೆ ಅಕ್ಕರೆ ತೋರುತ್ತಾ
ಸುಂದರ ಜೀವನದೆಡೆಗೆ ಎಲ್ಲರೂ ಒಟ್ಟಿಗೆ ಸಾಗೋಣ ....
-LSS
Comments
Post a Comment