ಸೂರ್ಯ ಸಾಮ್ರಾಜ್ಯ


ಅಪರಾಹ್ನದ ಸೂರ್ಯ ನೆತ್ತಿ ಮೇಲಿತ್ತು
ಬಿಸಿಲಿನ ಶಾಖ ಬಿರುಸಾಗಿ ಪ್ರಖರವಾಗಿತ್ತು
ಜೀವರಸವನ್ನು ಹೀರಿ , ಜೀವಜಲವನ್ನು ಬರಡು ಮಾಡಿತ್ತು 
ಜನಸಾಮಾನ್ಯರು ಬಳಲಿ , ನರಳುವಂತೆ ಮಾಡುತ್ತಿತ್ತು

ಧರೆಯ ಮೇಲೆ ಹೊಗೆಯಾಡುತ್ತಿತ್ತು
ಬಿಸಿ ಗಾಳಿಯು , ಸಿಕ್ಕ ಸಿಕ್ಕವರನ್ನು ಸುಡುತ್ತಿತ್ತು
ಆಗ ತಾನೇ ಚಿಗುರಿದ ಎಲೆಗಳು ಸುಟ್ಟು ಹೋಗುತ್ತಿತ್ತು
ಯಾರ ಮೇಲೂ ಕರುಣೆ ತೋರದೆ ಸೂರ್ಯ ಸಾಮ್ರಾಜ್ಯ ರಾರಾಜಿಸುತ್ತಿತ್ತು

ಆ ಊರಿನಲ್ಲಿ ಇಂತಹ  ಬರಗಾಲ ಆವರಿಸಿತ್ತು
ನೀರಿಗಾಗಿ ಹೊಡೆದಾಟ , ನೆರಳಿಗಾಗಿ ಪರದಾಟ
ಯಾರೂ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ
ಒಗ್ಗಟ್ಟು ಕರಗಿ, ಎಲ್ಲೆಡೆ ಹಗೆಯ ಬೇಗೆ ಹರಡುತ್ತಿತ್ತು

ಅಂದು ಕೂಡ ಬಿರುಬಿಸಿಲು ದಾಳಿಯನು ಮುಂದುವರೆಸಿತ್ತು
ಅಕಸ್ಮಾತ್ತಾಗಿ ಏನೊ ಸುಟ್ಟು ಸ್ಪೋಟವಾದಂತೆ ಸದ್ದಾಯಿತು
ಊರಿನ ಜನ ಹೊರಬಂದು ನೋಡಿದರೆ , ಜೋರಾಗಿ ಗುಡುಗುತ್ತಿತ್ತು
ಮಿಂಚುಗಳ ಬಾಣ ಭೂಮಿಯತ್ತ ಬರುತ್ತಿತ್ತು ,ಮಳೆಯ ಹನಿಗಳು ಊರನ್ನು ಆವರಿಸಿತ್ತು

ಮನೆಯ ಜನರೆಲ್ಲಾ ರಸ್ತೆಗೆ ಇಳಿದು , ಒಟ್ಟಾಗಿ ಕುಣಿದು ಸಂಭ್ರಮಿಸಿದರು
ಬರಗಾಲ ನೀಗಲಿಲ್ಲ , ಬಾಯಾರಿಕೆ ನೀಗಿತ್ತು
ಮಳೆಗಾಲ ಬರಲಿಲ್ಲ , ಧರೆ ಸ್ವಲ್ಪ ತಂಪಾಗಿತ್ತು
ಊರಿಗೆ ಊರೇ , ಅಂದು ರಾತ್ರಿ ನೆಮ್ಮದಿಯ ನಿದ್ರೆ ಮಾಡಿತ್ತು .
                                                                                         
                                                                                 - LSS
                                                         
                                                                                        

Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ