ಅಪ್ರತಿಮ ಆಭರಣ...



ಬೀಗಿದಳು ಸಿರಿಕನ್ಯೆ , ಕೊರಳ ಹಾರವ ಹಾಕಿಕೊಂಡು
ಎಲ್ಲರ ಕಣ್ಣಲ್ಲೂ , ಎಲ್ಲರ ಮಾತಲ್ಲೂ , ಎಲ್ಲರ ಮನಸಲ್ಲೂ ಅದರದೇ ಛಾಪು
ಗೆಳತಿಯರ ಈರ್ಷೆಯ ನೋಟ , ಗಂಡಸರ ಮೆಚ್ಚುಗೆಯ ನೋಟ ,
ಕರಿಮಣಿಯ ತೊಟ್ಟ ಬಡವಿಯದು ಆಸೆಯ ನೋಟ

ಕೊರಳ ಹಾರದ ಹಿಂದೆ ಕರಾಳ ಕಥೆಯೊಂದು ,
ಬಳಲಿ , ಬೇಸತ್ತ ಬಡ ಸಾಲಿಗನ ವ್ಯಥೆಯೊಂದು
ಸಾಲ ಮಾಡಿ, ಹೊನ್ನನು ತಂದು
ಮೃದುತನವ ಮರೆಮಾಡಲು ತಾಮ್ರವ ಬೆರೆಸಿ

ಆಯುಧಗಳ ಬಳಸಿ , ಆಕಾರವ ನೀಡಿ
ಬೆಂಕಿ , ನೀರಿನ ಜೊತೆಯಲಿ ಹೆಣಗಾಡಿ
ಕಣ್ಣಲ್ಲಿ ಕಣ್ಣಿಟ್ಟು ಹರಳುಗಳ ಕೂಡಿ
ನಾಜೂಕಿನ ಕೆತ್ತನೆಗಳ ತಿದ್ದಿ ಸರಿಮಾಡಿ

ಜೀವನದ ಎಲ್ಲ ವಿಕಾರಗಳ ಮರೆತು
ಪ್ರೀತಿಯ ಧಾರೆಯೆರೆದು ಆಭರಣವ ರೂಪಿಸಿದ
ಮತ್ತೆ ಮತ್ತೆ ಪರಿಶೀಲಿಸಿ , ಮತ್ತೆ ಮತ್ತೆ ನೋಡಿ
ಅಳತೆ , ಗಾತ್ರ , ತೂಕವ ಪರೀಕ್ಷಿಸಿದ

ಹಾರವ ಕೊಡಲು , ಹಣವ ತರಲು ಧಣಿಯ ಮನೆಗೆ ಹೊರಟಿದ್ದ
ದಾರಿಯಲಿ ಕಳ್ಳನೊಬ್ಬ ಹೊಂಚು ಹಾಕಿ ಕುಳಿತಿದ್ದ
ಕ್ಷಣ ಮಾತ್ರದಲಿ  ಹಾರವನ್ನು ದೋಚಿ ಮರೆಯಾದ
ಏನೂ ತೋಚದೆ , ಏನೂ ತಿಳಿಯದೆ , ಆಚಾರಿ ರಸ್ತೆಯಲೇ  ಕುಸಿದಿದ್ದ

ಉಸಿರು ಬಿಗಿ ಹಿಡಿದು , ಮತ್ತೆ ಧೈರ್ಯವ ಮಾಡಿ
ಮತ್ತೆ ಸಾಲವ ಕೇಳಿದ , ಮತ್ತೆ ಪರದಾಡಿದ
ರಾತ್ರಿ ಹಗಲೆನ್ನದೆ ಮತ್ತೆ ಹಾರವ ಮಾಡಿದ
ಲಕ್ಷ ಗಟ್ಟಲೆ ಸಾಲ ಮಾಡಿ, ಕೊನೆಗೂ ಆಭರಣ ತಯಾರಿಸಿದ

ಹಾರದ ಹರಳಿನ ಸಾಲು , ಆಚಾರಿಯ ಬೆವರಿನ ಹನಿಯ ಮಾಲೆಯoತಿದ್ದವು
ಹಾರದ ಒಳ ಸುರುಳಿಗಳು , ಆಚಾರಿಯ ಸಾಲದ ಸುಳಿಗಳoತಿದ್ದವು
ನೋಡುಗರ ಕಣ್ಣಿಗೆ ಅದು ಅಪ್ರತಿಮ ಆಭರಣ ದಂತಿತ್ತು
ಮಾಡಿದ ಕೈ ಗಳಿಗೆ ಅದು ಅನಿರೀಕ್ಷಿತ ಆಘಾತದ೦ತಿತ್ತು

                                                                                                -LSS









Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ