ಇನ್ನೂ ಸ್ವಲ್ಪ ಬೆಳಕಿತ್ತು , ಇನ್ನೂ ಸ್ವಲ್ಪ ಬದುಕಿತ್ತು .... !!!
ಮುಗ್ಧ ಭಾವನೆಗಳಿಗೆ ಬಲವಾದ ಏಟು ಬಿದ್ದಿತ್ತು ,
ಚೇತರಿಸಿಕೊಳ್ಳಲು ಆಗದಂತೆ ಮನಸ್ಸಿಗೆ ಗಾಯವಾಗಿತ್ತು
ಆತ್ಮವಿಶ್ವಾಸದ ಮಾತು ಈಗ ಕೇವಲ ಇತಿಹಾಸವಾಗಿತ್ತು
ಬದುಕು ಬಯಲಾಟವಾಗಿ , ಅನ್ಯರಿಗೆ ಹಾಸ್ಯದ ವಸ್ತುವಾಗಿತ್ತು
ಚೇತರಿಸಿಕೊಳ್ಳಲು ಆಗದಂತೆ ಮನಸ್ಸಿಗೆ ಗಾಯವಾಗಿತ್ತು
ಆತ್ಮವಿಶ್ವಾಸದ ಮಾತು ಈಗ ಕೇವಲ ಇತಿಹಾಸವಾಗಿತ್ತು
ಬದುಕು ಬಯಲಾಟವಾಗಿ , ಅನ್ಯರಿಗೆ ಹಾಸ್ಯದ ವಸ್ತುವಾಗಿತ್ತು
ತಪ್ಪು ತನ್ನದೋ , ತನ್ನವರದ್ದೋ , ಪ್ರಪಂಚದ್ದೋ ತಿಳಿಯದಾಗಿತ್ತು
ಪರಿಹಾರದ ಮಾರ್ಗಗಳು ಗೋಚರಿಸದಂತಾಗಿತ್ತು
ಭೂತ ಭವಿಷ್ಯಗಳ ಗುಂಗಿನಲಿ ವರ್ತಮಾನ ಬರಡಾಗುತ್ತಿತ್ತು
ಪ್ರತೀ ದಿನ , ಪ್ರತೀ ಕ್ಷಣ ಜೀವ- ನಿರ್ಜೀವ ವಾಗುತ್ತಾ ಸಾಗುತ್ತಿತ್ತು
ಭಾವನೆಗಳನ್ನೆಲ್ಲಾ ಕೂಡಿಟ್ಟು ಕೋಣೆಯಲಿ ತುಂಬಲಾಗಿತ್ತು
ಅವುಗಳ ನಡುವೆ ತನ್ನನ್ನು ತಾನೇ ಬಂಧಿಸಲಾಗಿತ್ತು
ಆಸೆ, ನಿರೀಕ್ಷೆ , ನಂಬಿಕೆಗಳ ಅಸ್ತಿತ್ವ ಕಾಣೆಯಾಗಿತ್ತು
ಸ್ಮಶಾನದಲಿ ಶವಗಳೊಡನೆ ವಾಸಿಸುವಂತೆ ಭಾಸವಾಗುತ್ತಿತ್ತು
ಎದ್ದು ಕೂತಳು , ಬಿದ್ದು ಹೊರಳಾಡಿದಳು , ಯಾರಾದರು ಇರುವರೇ ಎಂದು ಹಾತೊರೆದಳು
ಮುಸ್ಸಂಜೆಯ ತಂಗಾಳಿ ಬೀಸಿತ್ತು , ಕಿಟಕಿಯ ಪರದೆ ಮೆಲ್ಲನೆ ತೆರೆದಿತ್ತು
ತಂಗಾಳಿ ಮೈಯನು ಸೋಕಿ ಎಚ್ಚರ ಗೊಳಿಸಿತ್ತು
ಹೊರನೋಡಿದಳು , ಇನ್ನೂ ಸ್ವಲ್ಪ ಬೆಳಕಿತ್ತು , ಇನ್ನೂ ಸ್ವಲ್ಪ ಬದುಕಿತ್ತು
ಬದುಕು ಇನ್ನು ಮುಗಿದಿಲ್ಲ ಎಂದು ಹೇಳುವoತಿತ್ತು
ತಂಗಾಳಿಯ ಸಾಂತ್ವನಕ್ಕೆ , ಬೆಳಕಿನ ಭರವಸೆಗೆ ತನ್ನ ಪ್ರಪಂಚವ ಮರೆತಾಗಿತ್ತು
ಭಾವನೆಗಳ ಕೂಡಿಟ್ಟ ಕೋಣೆಯಿಂದ ನಿಧಾನವಾಗಿ ಜೀವನ ಹೊರನಡೆದಿತ್ತು
ಎಲ್ಲ ಬಂಧನಗಳ ಬಿಡಿಸಿಕೊಂಡು , ಬದುಕು ಮತ್ತೆ ಶುರುವಾಗಿತ್ತು
Very meaningful,true
ReplyDeleteThank u :)
Delete