ಒಳಗೆ-ಹೊರಗೆ



ದೂರದೂರಿನ ಮಧ್ಯೆ ,ಸಭ್ಯ ನಾಗರೀಕರ ನಡುವೆ
ಹೊಸದಾಗಿ ಕಟ್ಟಿದ್ದ ಮನೆಯೊಂದು , ಅದರಲ್ಲಿ ಪುಟ್ಟ ಸಂಸಾರ ಒಂದು
ಮನೆಯ ಹೊರಗೆ ಕತ್ತಲಾವರಿಸಿತ್ತು , ದಟ್ಟವಾದ ಮೋಡ ಕವಿದಿತ್ತು
ಮಳೆಗಾಲದ ಏರುಗಾಲವದು, ಗಾಢ ಅಮಾವಾಸ್ಯೆಯ ರಾತ್ರಿಯದು

ಅನುಮಾನದ ವಿಷಯವಾಗಿ , ದಂಪತಿಯ ನಡುವೆ ಕಾದಾಟ ಶುರುವಾಗಿತ್ತು
ಅವನಿಗೆ ಅವಳ ಮೇಲೆ , ಅವಳಿಗೆ ಅವನಮೇಲೆ , ಇಬ್ಬರಿಗೂ ಅವರ ಸಂಬಂಧದ ಮೇಲೆ
ಮನೆಯ ಹೊರಗೆ , ಗುಡುಗಲಾರಂಭಿಸಿತ್ತು ,ಮೆಲ್ಲನೆ ಮಳೆ ಸುರಿಯಲಾರಂಭಿಸಿತ್ತು
ಪ್ರಕೃತಿಯ ಸೊಗಸೋ , ಮೋಡಗಳ ನಡುವಿನ ಮುನಿಸೋ ಅಂತೂ ಮಳೆ ಶುರುವಾಯಿತು

ಕಾದಾಟದ ತೀವ್ರತೆ ತಾರಕಕ್ಕೇರಿತು , ಸಂಬಂಧ ನೈತಿಕವೋ ? , ಅನೈತಿಕವೋ ?
ಅನುಮಾನ ವಾಸ್ತವವೋ ? ಕಲ್ಪನೆಯೋ ? ಯಾವುದನ್ನೂ ಲೆಕ್ಕಿಸದೇ ಕಾದಾಟ ಸಾಗಿತ್ತು
ಮನೆಯ ಹೊರಗೆ, ಮೋಡಗಳ ಆರ್ಭಟ ಒಮ್ಮೆಲೇ ಹೆಚ್ಚಾಯಿತು ,
ಬೆಂಕಿಯ ಜ್ವಾಲೆಗಳಂತೆ ಸಿಡಿಲು ಬಡಿಯಲಾರಂಭಿಸಿತ್ತು,ಮಳೆ ಜಡಿ ಹಿಡಿದಂತೆ ಆಡುತ್ತಿತ್ತು

ಹೊದಿಕೆಯ ತಬ್ಬಿ ಮಲಗಿದ್ದ  ಮುಗ್ಧ ಮಗು ಹೆದರಿಕೊಂಡಿತ್ತು
ತಂದೆ ತಾಯಿಯ ಜಗಳ ಅಂತ್ಯ ವಾಗಲಿ ಎಂದು ಪ್ರಾರ್ಥಿಸುತ್ತಿತ್ತು
ಮನೆಯ ಹೊರಗೆ ,ಬಾಗಿಲ ಬಳಿ ಬೆಕ್ಕೊಂದು ನಿಂತಿತ್ತು
ಗುಡುಗಿನ ಸದ್ದಿಗೆ ಹೆದರಿ ಮೆಲ್ಲನೆ ನಡುಗುತ್ತಿತ್ತು

ಇಬ್ಬರಿಗೂ ಕಾದಾಡಿ ಸಾಕಾಯಿತು , ಭಾವನೆಗಳ ಭೋರ್ಗರೆತ ಮುಗಿದಿತ್ತು
ಪರಸ್ಪರರ ನಿಂದಿಸಿ ದಂಪತಿಯ ಮನಸ್ಸು ಹಗುರಾಗಿತ್ತು
ಮನೆಯ ಹೊರಗೆ ಪ್ರಶಾಂತತೆ ಆವರಿಸಿತ್ತು
ಬೆಳಗಾದಂತೆ ಮೋಡಗಳು ತಿಳಿಯಾಗಿತ್ತು

ಯಾರೋ ಹೇಳಿದ್ದು , ಎಲ್ಲೋ ಕೇಳಿದ್ದು
ಗಂಡ ಹೆಂಡಿರ ಜಗಳ ಉಂಡು ಮಲಗುವತನಕವಂತೆ
ಅಮಾವಾಸ್ಯೆಯ ಮಳೆ ಬೆಳಕು ಹರಿಯುವವರೆಗಂತೆ


                       
                                                                      -LSS


   


Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ